ಉಡುಪಿ : ಸಮಾಜದಲ್ಲಿ ಧರ್ಮ ಸ್ಥಾಪನೆಯಾಗಬೇಕಾದರೆ ಪುರೋಹಿತರ ಪಾತ್ರ ಬಹುಮುಖ್ಯವಾದದ್ದು ಅನೇಕ ಸಮಸ್ಯೆಗಳು ಎದುರಾದಾಗ ಪುರೋಹಿತರು ಮಾರ್ಗದರ್ಶನವನ್ನು ನೀಡುತ್ತಾರೆ. ಕಷ್ಟದಲ್ಲಿರುವ ಜನಸಾಮಾನ್ಯರಿಗೆ ಪುರೋಹಿತರು ಮಂತ್ರಗಳಿಂದ ಕಷ್ಟವನ್ನು ದೂರ ಮಾಡುತ್ತಾರೆ. ಇಂತಹ ಪುರೋಹಿತರ ಸಂರಕ್ಷಣೆ ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಪುರೋಹಿತರ ಸಂರಕ್ಷಣೆಗಾಗಿ ವೈದಿಕ ಧರ್ಮದ ಪ್ರಚಾರಕ್ಕಾಗಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾಪೀಠಕ್ಕೆ ಸೇರಿಸಬೇಕು ಎಂದು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಕರೆ ನೀಡಿದರು. ಅವರು ಇಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶ್ರೀ ಪುತ್ತಿಗೆ ವಿದ್ಯಾಪೀಠದ 37 ನೇಘಟಿಕೋತ್ಸವದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು
ಇಂದಿನ ಯಾಂತ್ರಿಕ ವಾತಾವರಣದ ಪ್ರಭಾವದಲ್ಲಿ ಎಲ್ಲರೂ ಇಂಜಿನಿಯರಿಂಗ್ – ಮೆಡಿಕಲ್ ಮುಂತಾದ ಲೌಕಿಕ ಶಿಕ್ಷಣವನ್ನು ಬಯಸುತ್ತಿದ್ದಾರೆ. ಆದರೆ ಸ್ವಸ್ತಿ ಪ್ರಜಾಭ್ಯ: ಎಂದು ವಿಶ್ವದ ಕ್ಷೇಮವನ್ನು ನಿಸ್ವಾರ್ಥವಾಗಿ ಬಯಸುವವರು ಪುರೋಹಿತರು. ಇಂಥಹ ಪುರೋಹಿತರ ನಿರ್ಮಾಣ ಅತ್ಯಗತ್ಯವಾಗಿದೆ. ಪುರೋಹಿತರ ನಿರ್ಮಾಣದಿಂದ ಘೋಷಣೆಯಿಂದ ದೇಶದಲ್ಲಿ ಧರ್ಮದ ಸ್ಥಾಪನೆಯಾಗುತ್ತದೆ. ಇಂತಹ ಪುರೋಹಿತರ ನಿರ್ಮಾಣದ ಪ್ರಧಾನ ಆಶಯದೊಂದಿಗೆ ನಾವು ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪನೆ ಮಾಡಿದೆವು.
ಈಗ ದೇಶವಿದೇಶಗಳ ನೂರಾರು ಶಾಖೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಧರ್ಮ ಪ್ರಚಾರದಲ್ಲಿ ನಿರತರಾಗಿರುವುದು ನಮಗೆ ಸಂತಸ ತಂದಿದೆ. ಪ್ರಕೃತ 37ನೆಯ ಘಟಕೋತ್ಸವದಲ್ಲಿ ಮಂಗಳವನ್ನು ಆಚರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಧ್ಯಯನವನ್ನು ನಡೆಸಿ ಸಮಾಜದಲ್ಲಿ ಉತ್ತಮ ವಿದ್ವಾಂಸರಾಗಿ ಯಶಸ್ಸನ್ನು ಕಾಣುವಂತಾಗಲಿ ಎಂದು ಹಾರೈಸಿದರು.