ಕೃಷ್ಣ ಅದೆಷ್ಟು ಸುಂದರ. ಕೃಷ್ಣನ ಹಸನ್ಮುಖದ ಆ ತುಂಟ ನಗೆ , ಕೊಳಲಿನ ಆ ಮಧುರ ನಾದ , ಆತನನ್ನು ನೆನಪಿಸಿಕೊಂಡ ಒಡನೆ ನೆನಪಾಗುವಳು ರಾಧೆ. ಅದೆಷ್ಟು ಪವಿತ್ರ ಆ ಪ್ರೀತಿ ಸಂಬಂಧ ಕೃಷ್ಣ ಇಲ್ಲದೆ ರಾಧೆ ಮಂಕಾಗುವಳು ಎಂಬ ಭಾವ. ರಾಧೆಯ ಆ ಪ್ರೀತಿ , ಕೃಷ್ಣನ ಆ ಭಾವ ರಾಧಾಕೃಷ್ಣ ಎಂಬ ನಾಮಕ್ಕೆ ಮೆರುಗನ್ನು ಕೊಡುತ್ತಿತ್ತು. ಕೃಷ್ಣನ ಬಾಲ್ಯ ಲೀಲೆಗಳು ಆತನ ದೈವತ್ವವನ್ನು ಸಾರಿ ಸಾರಿ ಹೇಳುತ್ತಿತ್ತು. ಕೃಷ್ಣನ ಆ ಸೌಂದರ್ಯಕ್ಕೆ ಪೂತನಿ ಒಂದು ಕ್ಷಣ ದಂಗಾಗಿ ಬಿಟ್ಟಿದ್ದಳಂತೆ. ತಾಯಿಗೆ ಬಾಯಲ್ಲಿ ಬ್ರಹ್ಮಾಂಡ ತೋರಿಸಿದ. ಕಂಸನ ಮರ್ಧನ ಮಾಡಿದ. ಗೋವರ್ಧನ ಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ಇಂದ್ರನ ಗರ್ವಭಂಗ ಮಾಡಿದ. ಕಾಳಿಂಗ ಮರ್ದನದ ಆ ನರ್ತನದ ಭಂಗಿ ನೋಡಲು ಎರಡು ಕಣ್ಣು ಸಾಲದು. ಅರ್ಜುನ ಕುರುಕ್ಷೇತ್ರದಲ್ಲಿ ಯುದ್ಧ ಮಾಡುವುದಿಲ್ಲ ಎಂದಾಗ ಪರಮ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಬೋಧಿಸಿದವನು
ಶ್ರೀ ಕೃಷ್ಣನೇ. ಶ್ರೀ ಕೃಷ್ಣನ ಆ ಬೋಧನೆ ಬದುಕಿನ ಪ್ರತಿಯೊಂದು ಹಂತದಲ್ಲಿ ಬೇಕಾದಂತಹ ಅಂಶಗಳನ್ನು ಭಗವದ್ಗೀತೆಯಲ್ಲಿ ವಿಶ್ಲೇಷಿಸಲಾಗಿದೆ. ಕೃಷ್ಣನೆಂದರೆ ದೈವಿಕ , ಆಧ್ಯಾತ್ಮಿಕ ದರ್ಶನಿಕ ಶಕ್ತಿ ಮತ್ತು ವ್ಯಕ್ತಿ. ರಾಘವೇಂದ್ರ ಸ್ವಾಮಿಗಳು ನೆನೆದರೆ ಸಾಕು ಮುಗುಳ್ನಗೆನೆ ನಗುತ್ತಾ ಪುಟ್ಟ ಮುರಳಿ ಮೋಹನ ಥಟ್ಟನೆ ಪ್ರತ್ಯಕ್ಷವಾಗಿ ಬಿಡುತ್ತಿದ್ದನಂತೆ. ಅದಕ್ಕಾಗಿ ರಾಘವೇಂದ್ರ ಸ್ವಾಮಿಗಳು ಕೃಷ್ಣನನ್ನು ಇಂದು ಎನಗೆ ಗೋವಿಂದ ….. ಎಂದು ನೆನೆದಿದ್ದಾರೆ ಭಕ್ತಿ ಗೀತೆ ಬರೆದಿದ್ದಾರೆ.
ಶ್ರೀ ಕೃಷ್ಣ ತನ್ನ ಭಕ್ತ ಕನಕದಾಸನಿಗೆ ತಾನೆ ಮೊದಲಿದ್ದ ಭಂಗಿಯಿಂದ ತಿರುಗಿ ಕಿಂಡಿಯ ಮೂಲಕ ದರ್ಶನ ನೀಡಿದನಂತೆ. ಕೃಷ್ಣನೆಂದರೆ ಒಂದು ಅದ್ಭುತ ಶಕ್ತಿ ಮತ್ತು ದೈವಿಕ ಅನುಭವ.
ಫ್ರದೀಪ್ ಚಿನ್ಮಯಿ ಆಸ್ಪತ್ರೆ,ಕುಂದಾಪುರ