ಉಡುಪಿ : ಭಗವದ್ಗೀತೆಯಲ್ಲಿ ಶ್ರೀಕೃಷ್ಣನೂ ಕೌಶಲಯುಕ್ತ ಕಾರ್ಯವೂ ಯೋಗ ಎಂದು ಹೇಳಿದ್ದಾನೆ. ನಾವು ಮಾಡುವ ಯಾವುದೇ ಕಾರ್ಯಗಳಲ್ಲಿ ಕೌಶಲ್ಯ ಮುಖ್ಯ. ಕೇಂದ್ರ ಸರ್ಕಾರವೂ ಕೌಶಲ್ಯವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ. ಬ್ರಾಹ್ಮಣರೂ ಸೇರಿದಂತೆ ಎಲ್ಲಾ ವರ್ಗದ ಜನತೆ ತಮ್ಮ ಪರಂಪರಾಗತ ವಿದ್ಯೆಗಳನ್ನು ಮೈಗೂಡಿಸಿಕೊಂಡು ಲೌಕಿಕ ವಿದ್ಯೆಯತ್ತ ಗಮನ ನೀಡಬೇಕು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹೇಳಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾದ ಶ್ರೀಕೃಷ್ಣ ಮಾಸೋತ್ಸವ ಸಂದರ್ಭದಲ್ಲಿ ನಡೆಸಲಾಗುತ್ತಿರುವ ಶ್ರೀಕೃಷ್ಣ * ಸಪ್ತೋತ್ಸವ ಹಾಗೂ ಕರಕುಶಲ ವಸ್ತುಪ್ರದರ್ಶನ ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಕೃಷ್ಣನಿಗೆ ಬಗೆ ಬಗೆಯ ಹೂವುಗಳನ್ನುಪೋಣಿಸಿ ಹಾರಮಾಡಿ ಸಮರ್ಪಿಸಿದಂತೆ ಸಮಾಜದ ಎಲ್ಲಾ ವರ್ಗ, ವರ್ಣದ ಜನತೆಯಲ್ಲಿ ಪರಸ್ಪರ ಸಹಕಾರ ಸೌಹಾರ್ದತೆ ಇದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಕಟಪಾಡಿ ಶ್ರೀ ಕಾಳಕಾಂಬಾ ದೇವಸ್ಥಾನದ ಆಡಳಿತ ಮೊಕ್ತಸರ ಮುರಹರಿ ಆಚಾರ್ಯ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು ಮತ್ತು ಸುರೇಂದ್ರ ಕಲ್ಯಾಣಪುರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ದುಗ್ಗೇಗೌಡ, ಲಯನ್ಸ್ ಕ್ಲಬ್‌ನ ಹರಿಪ್ರಸಾದ ಛಾಯಾಗ್ರಾಹಕ ಮಿನೇಜಸ್ ಪ್ರೇಮ್ ಮೊದಲಾದವರಿದ್ದರು. ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ರಘುಪತಿ ಭಟ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ರಮೇಶ ಭಟ್ ನಿರೂಪಿಸಿ, ರವೀಂದ್ರ ಆಚಾರ್ಯ ವಂದಿಸಿದರು. ಭರತನಾಟ್ಯದಲ್ಲಿ ಡಾಕ್ಟರೇಟ್ ಪಡೆದ ಕಲಾವಿದೆ ಅನಘ ಜಿ.ಎಸ್. ಅವರನ್ನು ಗೌರವಿಸಲಾಯಿತು. ಪಸಗಿ ವಿಜಯೀಂದ್ರಾಚಾರ್ಯ ಅವರಿಂದ ಉಪನ್ಯಾಸ, ಮಂಗಳೂರು ನೃತ್ಯಕೇಂದ್ರ ಕಲಾಶ್ರೀ ಕಲಾವಿದರಿಂದ ಭರತ ನಾಟ್ಯ ನಡೆಯಿತು.