ಉಡುಪಿ : ಶ್ರೀಕೃಷ್ಣ ಕ್ಷಿಪ್ರ ಫಲದಾಯಕ ಆತನ ಪೂಜೆಯಿಂದ ಶೀಘ್ರ ಫಲ ಪಡೆಯುವುದು ಸಾಧ್ಯ. ಈ ನಿಟ್ಟಿನಲ್ಲಿ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಎಲ್ಲರಿಗೂ ಕೃಷ್ಣನ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಕೃಷ್ಣನ ಜನ್ಮೋತ್ಸವವನ್ನು ಸಂಭ್ರಮದಿಂದ ಆಚರಿಸುವ ಮೂಲಕ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿ ಆಚರಿಸಲು ಸಂಕಲ್ಪಿಸಿರುವುದಾಗಿ ಪರ್ಯಾಯ’ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹೇಳಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಸೆ. 01ರವರೆಗೆ ನಡೆಯುವ ಕೃಷ್ಣ ಮಾಸೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಅಧ್ಯಕ್ಷತೆ ವಹಿಸಿ ಶ್ರೀಪಾದರು ಮಾತನಾಡಿದರು.
ಗುರುವಿನ ಮೂಲಕ ದೇವರ ದರ್ಶನ ಸಾಧ್ಯ ಹಾಗಾಗಿ ತಮ್ಮ ಗುರುಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನೆಯ ದಿನದಂದು ಕಾರ್ಯಕ್ರಮ ಆರಂಭಿಸಿರುವುದಾಗಿ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥರು, ಭಾಗವತ ಮತ್ತು ಮಹಾಭಾರತದಲ್ಲಿ ಕೃಷ್ಣನನ್ನು ಚಿತ್ರಿಸಲಾಗಿದೆ. ಕಷ್ಟ ಕಾಲದಲ್ಲಿ ಕೃಷ್ಣನನ್ನು ಸ್ಮರಿಸಿದರೇ ಪರಿಹಾರ ದೊರಕುತ್ತದೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಪ್ರೀಂದ್ರತೀರ್ಥರು, ಅಭ್ಯಾಗತರಾದ ಶಿಕ್ಷಣ ತಜ್ಞಪ್ರೊ. ಕೆ.ಇ. ರಾಧಾಕೃಷ್ಣ ಬೆಂಗಳೂರು, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ವಕೀಲ ಪ್ರದೀಪ ಕುಮಾರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ ಶೆಟ್ಟಿ ಉದ್ಯಮಿ ಸಂತೋಷ ಶೆಟ್ಟಿ ಇದ್ದರು. ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರರು. ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು. ರವೀಂದ್ರ ಆಚಾರ್ಯ ಮತ್ತು ರಮೇಶ ಭಟ್ ಸಹಕರಿಸಿದರು. ವಿದ್ವಾನ್ ಗೋಪಾಲಾಚಾರ್ ಕಾರ್ಯಕ್ರಮ ನಿರೂಪಿಸಿದರು. ಆನ್‌ಲೈನ್ ರಸಪ್ರಶ್ನೆಗೆ ಚಾಲನೆ ನೀಡಲಾಯಿತು. ವಾದಿರಾಜ ಚೊಕ್ಕಾಡಿ ಮತ್ತು ಪ್ರಮೋದ್ ಸಾಗರ್ ಸಹಕರಿಸಿದರು. ಬಳಿಕ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗೀತೆ ನಡೆಯಿತು.