ಉಡುಪಿ : ಪರ್ಯಾಯ ಪುತ್ತಿಗೆ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಮಾಸೋತ್ಸವವು ಆಗಸ್ಟ್ 01ರಿಂದ ಸೆಪ್ಟೆಂಬರ್ 01ರ ತನಕ ಧಾರ್ಮಿಕ, ಸಾಂಸ್ಕೃತಿಕ, ಪ್ರವಚನ ಸಹಿತ ಸಾಂಪ್ರದಾಯಿಕ ಮತ್ತು ವೈಭವಪೂರ್ಣವಾಗಿ ನಡೆಯಲಿದ್ದು, ಅಗಸ್ಟ 01ರಂದು ಶ್ರೀಕೃಷ್ಣ ಮಾಸೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ನಿನ್ನೆ ಸೋಮವಾರ ಉಡುಪಿಯ ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು
ಅಗಷ್ಟ್ 01ರಂದು ಸಂಜೆ 4.00 ಕ್ಕೆ ರಥಬೀದಿಯಿಂದ ರಾಜಾಂಗಣ ತನಕ ಮೆರವಣಿಗೆ, ಸಂಜೆ 5ಕ್ಕೆ ಶ್ರೀಕೃಷ್ಣ ಮಾಸೋತ್ಸವವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರರವರು ಉದ್ಘಾಟಿಸಲಿದ್ದು ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀವಿದ್ವೇಶತೀರ್ಥ ಶ್ರೀಪಾದರು, ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥರು ಪಾಲ್ಗೊಳ್ಳಲಿದ್ದಾರೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಕಾವು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಧರ್ಮದರ್ಶಿ ನಾಡೋಜ ಡಾ.ಜಿ.ಶಂಕರ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್. ನಿವೃತ್ತ ಪ್ರಿನ್ಸಿಪಾಲ್ ಪ್ರೊ.ರಾಧಾಕೃಷ್ಣ ಮುಖ್ಯ ಅತಿಥಿಗಳಾಗಿದ್ದಾರೆ
ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಆಶ್ರಮಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರ ಸಂಸ್ಕರಣೆ ಹಾಗೂ ಪರ್ಯಾಯ ಶ್ರೀಪಾದರಿಂದ ಆನ್ಲೈನ್ ಸ್ಪರ್ಧೆಗಳ ಉದ್ಘಾಟನೆ ನೆರವೇರಲಿದೆ
ಶ್ರೀಕೃಷ್ಣ ಮಾಸೋತ್ಸವದ ವ್ಯವಸ್ಥಿತ ಆಚರಣೆಗೆ ಸಮಿತಿ ರಚಿಸಲಾಗಿದೆ. ಪ್ರವಚನ, ಭಜನೆ, ಗೋಷ್ಠಿಗಳು ನಡೆಯಲಿವೆ. ಉಂಡೆ, ಚಕ್ಕುಲಿ, ಲಡ್ಡು ಶ್ರೀಕೃಷ್ಣನಿಗೆ . ವಿಶೇಷವಾಗಿದ್ದು, ಆ.22ರಂದು 108 ಲಡ್ಡು ತಯಾರಿ, ಶ್ರೀಕೃಷ್ಣನಿಗೆ ಸಮರ್ಪಣೆ, ಭಕ್ತರಿಗೆ ವಿತರಣೆ ಜತೆಗೆ ನಾನಾ ಲಡ್ಡುಗಳ ತಯಾರಿ ಮಾಹಿತಿಯನ್ನೂ ಜನರಿಗೆ ನೀಡಲಾಗುವುದು. ಶ್ರೀಕೃಷ್ಣನಿಗೆ ಮಧ್ವ ಮಂಟಪದಲ್ಲಿ ತೊಟ್ಟಿಲೋತ್ಸವ(ಡೋಲೋತ್ಸವ) ನಡೆಯಲಿದ್ದು ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ
ಕೋಟಿ ಗೀತಾ ಲೇಖನ ಯಜ್ಞ ಸೇವೆಯನ್ನೂ ಕೈಗೊಳ್ಳಬಹುದು. ಆ.22ರಿಂದ 26ರ ತನಕ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾಠ್ಯಕ್ರಮ ನಡೆಯಲಿದ್ದು ರಾಜ್ಯಪಾಲರಿಗೂ ಆಹ್ವಾನ ನೀಡಲಾಗಿದೆ. 21 ಸಾಂಪ್ರದಾಯಿಕ ಸ್ಪರ್ಧೆ, 18 ಕ್ರೀಡಾ ಸ್ಪರ್ಧೆ ಆಯೋಜಿಸ ಲಾಗಿದೆ. ಆ.1ರಿಂದ 11ರ ತನಕ ನೇಕಾರರಿಂದ ಕೈಮಗ್ಗ ವಸ್ತು ಪ್ರದರ್ಶನವಿದೆ. ರಾಜಾಂಗಣ, ಮಧ್ವ ಮಂಟಪ ದಲ್ಲಿ ನಿರಂತರ ಕಾರ್ಯಕ್ರಮ ನಡೆಯಲಿದೆ ಎಂದರು ಪತ್ರಿಕಾ ಗೋಷ್ಠಿಯಲ್ಲಿ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ರಮೇಶ್ ಭಟ್, ರವೀಂದ್ರ ಆಚಾರ್ಯ, ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.