ಉಡುಪಿ : ಮಂಗಳವಾರ ಕೃಷ್ಣಮಠದ ಹೊರಗೆ ಬಾಲಕೃಷ್ಣರ ವೈಭವದ ಶ್ರೀಕೃಷ್ಣ ಲೀಲೋತ್ಸವ – ಮೊಸರುಕುಡಿಕೆ ಆಚರಣೆ ನಡೆಯಿತು ಮುಂಜಾನೆ ಮಳೆ ಸುರಿದು ನಂತರ ಬಿಡುವು ನೀಡಿತು. ಬಿಸಿಲ ಬೇಗೆಯ ಮಧ್ಯೆಯೂ ಸಾವಿರಾರು ಮಂದಿ ಭಕ್ತರು ಲೀಲೋತ್ಸವ – ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು
ಮಧ್ಯಾಹ್ನ 3.00 ಗಂಟೆಗೆ ಸಂಪ್ರದಾಯದಂತೆ ಕೃಷ್ಣನ ಮೃಣ್ಮಯ ಮೂರ್ತಿಯನ್ನು ರಥರೋಹಣ ನಡೆಸಲಾಯಿತು. ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರು ಕೃಷ್ಣನಿಗೆ ಮಂಗಳಾರತಿ ಬೆಳಗಿದರು. ಈ ಸಂದರ್ಭದಲ್ಲಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಪುತ್ತಿಗೆ ಮಠದ ಕಿರಿಯ ಶ್ರೀ ಸುಶೀಂದ್ರತೀರ್ಥರು ಉಪಸ್ಥಿತರಿದ್ದರು.
ನಂತರ ಭಕ್ತರು ಭಕ್ತರು ಪೈಪೋಟಿಯಲ್ಲಿ ರಥವನ್ನು ಎಳೆಯಲಾರಂಭಿಸಿದರು. ಈ ನಡುವೆ ಅಲ್ಲಲ್ಲಿ ನಿರ್ಮಿಸಲಾಗಿದ್ದ ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಹಾಲು, ಬೆಣ್ಣೆ, ಮೊಸರು, ಕಜ್ಜಾಯದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಹಾರಿ ಕೋಲಿನಿಂದ ಒಡೆದು ಬಾಯಿ ಬಡಿದುಕೊಂಡು ಕುಣಿದಾಡುತ್ತಾ ಕೃಷ್ಣನ ಬಾಲ್ಯದ ಲೀಲೆಗಳನ್ನು ನೆನಪಿಸಿದರು.
ಸಾವಿರಾರು ಭಕ್ತರ ನಡುವೆ ರಥ ಮೇಲೆ ಕುಳಿತಿದ್ದ ಸಾಲಂಕೃತ ಕೃಷ್ಣ ಕೈಮುಗಿದು ನಿಂತ ಜನರ ಭಕ್ತಿಯ ಕೇಂದ್ರವಾಗಿದ್ದರೇ, ರಥದ ಹಿಂದೆ ತಾಸೆ ಪೆಟ್ಟಿಗೆ ಮೈಮರೆತು ಕುಣಿಯುತ್ತಿದ್ದ ಹುಲಿವೇಷಗಳು ಉತ್ಸವದ ಮುಖ್ಯ ಆಕರ್ಷಣೆಯಾಗಿದ್ದವು.
ಪರ್ಯಾಯ ಶ್ರೀಗಳು ರಥಬೀದಿಯಲ್ಲಿ ಹಾಕಲಾಗಿದ್ದ ಎತ್ತರದ ವೇದಿಕೆಯಲ್ಲಿ ನಿಂತು ಬಾಲಕೃಷ್ಣನಿಗೆ ಸಮರ್ಪಣೆ ಮಾಡಿದ ಲಡ್ಡು ಗುಂಡಿಟ್ಟು ಚಕ್ಕುಲಿ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಅದನ್ನು ಪಡೆಯಲು ಜನರು ಉತ್ಸಹದಿಂದ ಮುಗಿಬಿದ್ದರು.
ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವದ ನಂತರ, ಕೃಷ್ಣನ ಮಣ್ಣಿನ ವಿಗ್ರಹವನ್ನು ಪರ್ಯಾಯ ಶ್ರೀಗಳು ರಥಾವರೋಹಣಗೊಳಿಸಿ, ಮಠದೊಳಗೆ ಪೂಜೆ ಸಲ್ಲಿಸಿ, ನಂತರ ಮಧ್ವಸರೋವರದಲ್ಲಿ ವಿದ್ಯುಕ್ತವಾಗಿ ವಿಸರ್ಜನೆಗೊಳಿಸಿದರು. ಮಠದ ಶಿಷ್ಯರು ವಿಸರ್ಜನೆಗೊಳಿಸಿದ ಮೃಣ್ಮಯ ಮೂರ್ತಿಯನ್ನು ಪಡೆಯಲು, ಮಧ್ವಸರೋವರಕ್ಕೆ ಇಳಿದರು. ಶಿಷ್ಯರ ನಡುವೆ ಪೈಪೋಟಿ ನಡೆದು ಓರ್ವರು ಮೂರ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ ನಡೆಯಿತು.
ಮಠದ ದಿವಾನ ನಾಗರಾಜ ಆಚಾರ್ಯ,ಕಾರ್ಯದರ್ಶಿ ಪ್ರಸನ್ನಾಚಾರ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.