ಬೆಂಗಳೂರು: ಕಾಶಿ ವಿಶ್ವನಾಥ ದೇಗುಲ ಬದಿಯ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ‘ವ್ಯಾಸ್ ಕಾ ಠಿಖಾನಾ’ದಲ್ಲಿನ ಶೃಂಗಾರ ಗೌರಿ ಹಾಗೂ ಇತರ ಹಿಂದೂ ವಿಗ್ರಹಗಳನ್ನು ಪೂಜಿಸಲು ಹಿಂದೂಗಳಿಗೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದಾಗಿ ಜ್ಞಾನವಾಪಿ ಮಸೀದಿ ಕುರಿತ ಹೋರಾಟದಲ್ಲಿ ಹಿಂದೂ ಪಕ್ಷಗಾರರಿಗೆ ಮಹತ್ವದ ಜಯ ಲಭಿಸಿದಂತಾಗಿದೆ. 1993ರವರೆಗೂ ಜ್ಞಾನವಾಪಿ ತಳಮಹಡಿಯಲ್ಲಿರುವ ಶೃಂಗಾರ ಗೌರಿಗೆ ಕಾಶಿ ವಿಶ್ವನಾಥ ದೇಗುಲದ ಅರ್ಚಕ ಸೋಮನಾಥ ವ್ಯಾಸ್ ಅವರು ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು. ಆದರೆ ಬಾಬ್ರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದ ವ್ಯಾಸ್ ಅವರ ಮೊಮ್ಮಗ ಶೈಲೇಂದ್ರ ಕುಮಾರ್ ಪಾಠಕ್, ‘ಅಲ್ಲಿ ಪೂಜೆ ಮಾಡಲು ಅನುವು ಮಾಡಿಕೊಡಬೇಕು’ ಎಂದು ಸೆ.25. 2023ರಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು