ಬೆಳ್ತಂಗಡಿ : ಎಐ ಟೂಲ್ (ಕೃತಕ ಬುದ್ಧಿಮತ್ತೆ) ಬಳಸಿ ಧರ್ಮಸ್ಥಳ ಕ್ಷೇತ್ರ ನಿಂದನೆ ಮಾಡಿದ ಆರೋಪಕ್ಕೆ ಸ೦ಬ೦ಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿ ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದು, ತನಿಖಾಧಿಕಾರಿ ನಾಗೇಶ್ ಕದ್ರಿ ತೀವ್ರ ವಿಚಾರಣೆಗೆ ಒಳಪಡಿಸಿ ದರು.
ಎಐ ಟೂಲ್ ಬಳಸಿ ಸಮೀರ್, ‘ದೂತ’ ಯೂಟ್ಯೂಬ್ ಚಾನೆಲ್‌ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದ.ಬುರುಡೆ ಪ್ರಕರಣದ ಅನಾಮಿಕನ ಪರವಾಗಿ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಪ್ರಚಾರ ನಡೆಸಿದ್ದ. ಈ ಸಂಬಂಧ ಸಮೀರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು. ಇದರಿಂದಾಗಿ ಬಂಧನದ ಭೀತಿ ಎದುರಾಗಿದ್ದ ಸಮೀರ್‌ಗೆ, ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು. ಕರೆದಾಗ ವಿಚಾರಣೆಗೆ ಹಾಜರಾಗಿ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಷರತ್ತು ವಿಧಿಸಿತ್ತು.
ಪೊಲೀಸರು ಭಾನುವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಮೀರ್, ಸೌಜನ್ಯ ಕೇಸ್ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಕಾರಿನಲ್ಲಿ ನಾಲ್ವರು ವಕೀಲರ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಸಮೀರ್ ವಿರುದ್ದ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ ಮತ್ತಿತರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಕೇಸ್‌ಗಳು ದಾಖಲಾಗಿವೆ. ಆದರೆ, ಭದ್ರತೆ ಸಲುವಾಗಿ ಸಮೀರ್, ಧರ್ಮಸ್ಥಳ ಬದಲು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾಗಿ ತಿಳಿದುಬಂದಿದೆ

