Home » ಇದೇ ನಿಜವಾದ ನವರಾತ್ರಿ ಇದೇ ವಿಜಯದಶಮಿ
 

ಇದೇ ನಿಜವಾದ ನವರಾತ್ರಿ ಇದೇ ವಿಜಯದಶಮಿ

by Kundapur Xpress
Spread the love

ಈಗ ನವರಾತ್ರಿಯ ದಿನಗಳು. ನಿತ್ಯ ದೇವಿಯ ಒಂದೊಂದು ಸ್ವರೂಪದ ನಾಮಸ್ಮರಣೆ, ಪೂಜೆ, ಸ್ತುತಿಗಳು ನಡೆಯುತ್ತವೆ.
ಹೀಗೆ ಮೂರ್ತಿಯಲ್ಲಿರುವ, ಫೋಟೋದಲ್ಲಿರುವ, ಕಲಶದಲ್ಲಿರುವ, ಘಟದ ಮೊಳಕೆಯಲ್ಲಿರುವ ದೇವಿಯನ್ನು ಪೂಜಿಸಿದರೆ ಸಾಕಾ ? ನೀನು ದುರ್ಗೆ, ನೀನು ಸರಸ್ವತೀ, ನೀನು ಲಕ್ಷ್ಮೀ, ಅಷ್ಟು ಶಕ್ತಿವಂತೆ, ಇಷ್ಟು ಬಲಶಾಲಿಯಂತೆ, ಮೂರು ಲೋಕಗಳು ನಿನ್ನ ಸೃಷ್ಟಿ … ಇತ್ಯಾದಿ ಸ್ತುತಿಗಳನ್ನು ಹೇಳಿ ಏನು ಲಾಭ ? ಸಾಕ್ಷಾತ್ ದೇವಿಯಂತೆ ಮನೆಯಲ್ಲಿರುವ ಅಕ್ಕ ತಂಗಿ ತಾಯಿ ಪತ್ನಿ ಇವರುಗಳ ಸ್ಥಿತಿ ದುರ್ಬಲ ಇದ್ದರೆ ಈ ಪೂಜೆ ಸ್ತುತಿಗಳಿಂದ ಯಾವ ಪ್ರಯೋಜನ ?

ಹೀಗಾಗಿ ಮನೆಯಲ್ಲಿ ಜೀವಂತವಾಗಿರುವ ದೇವಿಯರನ್ನು ಸಬಲ ಮಾಡಬೇಕಾಗಿದೆ. ಅವರ ಮನಸ್ಸು ಬುದ್ಧಿ ಶರೀರಗಳನ್ನು ಜಗನ್ಮಾತೆಯ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಆತ್ಮಸಾಕ್ಷಾತ್ಕಾರದ ಅರಿವು ಮೂಡಿಸಬೇಕಾಗಿದೆ. ಅವಳಲ್ಲಿ ತುಂಬಿರುವ ಕೀಳರಿಮೆಯನ್ನು ತೊಡೆಯಬೇಕಾಗಿದೆ. ಆತ್ಮ ವಿಶ್ವಾಸ ಮೂಡಿಸಬೇಕಾಗಿದೆ. ಅವಳಿಗೆ ಅವಳದೇ ಆದ ಅಪಾರ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಬೇಕಾಗಿದೆ. ಪ್ರಬುದ್ಧಗೊಳಿಸಬೇಕಾಗಿದೆ. ಅವಳಲ್ಲಿನ ಕೊರತೆ ದೋಷಗಳನ್ನು ನಿವಾರಿಸಬೇಕಾಗಿದೆ. ನೂರಾರು ವರ್ಷಗಳ ಕಾಲದ ನಾನು ಅಬಲೆ, ನಾನು ದುರ್ಬಲ, ನಾನು ಕೀಳು, ನನ್ನಲ್ಲಿ ಏನೋ ಕೊರತೆ ಇದೆ, ನಾನು ಪುರುಷನಿಗಿಂತ ಕಡಿಮೆ ಇತ್ಯಾದಿ ಅನೇಕ ಕೀಳರಿಮೆಯ ಸಂಗತಿಗಳು ಡಿಎನ್ಎ ನಲ್ಲಿ ಸೇರಿಹೋಗಿವೆ. ಹೀಗಾಗಿ ಮಾತೃಶಕ್ತಿಯನ್ನು ಅವರಲ್ಲಿನ ದೈವತ್ವವನ್ನು ಎಚ್ಚರಿಸುವ ಬಡಿದೆಬ್ಬಿಸುವ ಅಗತ್ಯ ಇದೆ. ಅದೇ ನಿಜವಾದ ದೇವಿಯ ಪೂಜೆ, ನಿಜವಾದ ದುರ್ಗಾ ಸ್ತುತಿ, ಅದೇ ನಿಜವಾದ ದೇವಿ ಮಹಾತ್ಮೆ, ಅದೇ ನಿಜವಾದ ಶಾರದಾ ಪೂಜೆ, ಲಕ್ಷ್ಮೀ ಪೂಜೆ.
ಇಲ್ಲವಾದರೆ ಕೇವಲ ಫೋಟೋ ಪೂಜೆ, ಮೂರ್ತಿ ಪೂಜೆ ಅಷ್ಟೇ

ಇದಕ್ಕಾಗಿ ಏನು ಮಾಡಬೇಕು?
* ಹೆಣ್ಣುಮಕ್ಕಳನ್ನು ತಾಯಂದಿರನ್ನು ಕೂರಿಸಿಕೊಂಡು ಅವರ ನಿಜವಾದ ಶಕ್ತಿಯ ಅರಿವು ಮೂಡಿಸುವ ಕಥೆ, ಉದಾಹರಣೆ, ಪ್ರೇರಣೆ ಸಂಗತಿಗಳನ್ನು ತಿಳಿಸಬೇಕು.
* ಮನೆಯ ನಿರ್ವಹಣೆಯಲ್ಲಿ ಹೆಚ್ಚು ಹೆಚ್ಚು ಹೊಣೆಗಾರಿಕೆ ಕೊಡಬೇಕು. ಅಗತ್ಯ ಬಿದ್ದರೆ ತಿದ್ದಬೇಕು, ಕಲಿಸಬೇಕು, ಮೆಚ್ಚುಗೆ ಮೂಲಕ ಇನ್ನಷ್ಟು ಇನ್ನಷ್ಟು ಬೆಳೆಸಬೇಕು.
* ಶಾರೀರಿಕವಾಗಿ ಸದೃಢ ಆಗಲು ಆಹಾರ, ವ್ಯಾಯಾಮ, ಯೋಗ, ಸೂರ್ಯನಮಸ್ಕಾರ, ಪ್ರಾಣಾಯಾಮ, ಕರಾಟೆ, ಓಟ, ಈಜು, ಕಳರಿ, ಅಸ್ತ್ರ ಬಳಕೆ ಇತ್ಯಾದಿ ಕಡೆ ಗಮನ ಕೊಡಬೇಕು.
* ಮನಸ್ಸು ಬುದ್ಧಿಗಳನ್ನು ಬೆಳೆಸಲು ಉತ್ತಮ ಚರ್ಚೆ, ಸಂವಾದ, ಓದು, ಪುಸ್ತಕ ವಾಚನ, ವಿಚಾರ ಶ್ರವಣ, ಸ್ವಾಧ್ಯಾಯ, ಪ್ರಶ್ನೋತ್ತರ, ರಸಪ್ರಶ್ನೆ, ಸುಡೊಕು, ಪದಬಂಧ, ಚೆಸ್ ಇತ್ಯಾದಿ ನಡೆಸುವುದು.
* ಇವತ್ತಿನ ಜಗತ್ತಿನ ಧರ್ಮದ ಸೂಕ್ಷ್ಮಗಳು, ಮತೀಯವಾದಗಳು, ಲವ್ ಜಿಹಾದ್ ಮತಾಂತರ ಇತ್ಯಾದಿ ಸವಾಲುಗಳು ಇವುಗಳ ಬಗ್ಗೆ ಸ್ಪಷ್ಟ ಜಾಗೃತಿ ಮೂಡಿಸುವುದು
* ಆತ್ಮ ಜಾಗೃತಿಗಾಗಿ ಮೌನ ಧ್ಯಾನ, ಪ್ರಾಣಾಯಾಮ, ಜಪ, ಮಹಾಮಾತೆಯರ ಅಧ್ಯಯನ.
* ಮುಖ್ಯವಾಗಿ ಮಾನಸಿಕವಾಗಿ ಅಬಲೆ ಅಬಲೆ ಎನ್ನುವುದನ್ನು ತೆಗೆದುಹಾಕಿ, ನೀನು ಸಾಕ್ಷಾತ್ ದೇವಿ ಸ್ವರೂಪಿಣಿ, ನಿನ್ನಲ್ಲಿ ಜಗನ್ಮಾತೆಯ ಅಂಶ ಇದೆ ಇತ್ಯಾದಿ ಇತ್ಯಾದಿ ಭಾವನೆಗಳನ್ನು ತುಂಬುವ ಅಗತ್ಯ ಇದೆ.
* ಮನೆಯ ಸಮಾಜದ ಸಂಘಟನೆಯ ಪ್ರಮುಖ ನಿರ್ಣಯಗಳಲ್ಲಿ ಆಕೆಗೆ ಸಹಭಾಗಿತ್ವವನ್ನು ಕೊಡುತ್ತಾ, ಸಂದರ್ಭ ಸನ್ನಿವೇಶಗಳನ್ನು ಅರ್ಥ ಮಾಡಿಸುತ್ತಾ, ಕೆಲವೊಮ್ಮೆ ತಲೆದೋರುವ ಕೊರತೆಗಳನ್ನು ಸೂಕ್ತವಾಗಿ ಸರಿಪಡಿಸುತ್ತಾ ಬೆಳೆಸಿದರೆ ಅಗಾಧ ಶಕ್ತಿ ಬೆಳೆದು ದೇವಿ ರೂಪದಲ್ಲಿ ನಮ್ಮೆದುರಲ್ಲೇ ಪ್ರಜ್ವಲಿಸುವುದನ್ನು ನಾವು ನೋಡಬಹುದು ಇದೇ ನಿಜವಾದ ನವರಾತ್ರಿ ಇದೇ ನಿಜವಾದ ಸರ್ವರ ಪಾಲಿನ ವಿಜಯದಶಮಿ

ಸರ್ವರಿಗೂ ವಿಜಯದಶಮಿಯ ಹಾರ್ದಿಕ

ಶುಭಾಶಯಗಳು

ಸ್ವರ್ಣ ಕುಂದಾಪುರ

   

Related Articles

error: Content is protected !!