ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಹಾಗೂ ಕೊಲ್ಕತಾ ನೈಟ್ ರೈಡರ್‌ನ ಕೋಚ್ ಆಗಿದ್ದ ಗೌತಮ್ ಗಂಭೀರ್ ಭಾರತೀಯ ತಂಡದ ನೂತನ ಮುಖ್ಯ ಕೋಚ್ ಆಗಿ ನಿಯುಕ್ತರಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗಂಭೀರ್ ಅವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ.
ವಿಶ್ವಕಪ್ ಗೆದ್ದ ಭಾರತೀಯ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ತಮ್ಮ ಹುದ್ದೆ ತ್ಯಜಿಸಿರುವುದರಿಂದ ನೂತನ ಕೋಚ್ ನೇಮಕದ ಅಗತ್ಯ ಬಿದ್ದಿತ್ತು. ದ್ರಾವಿಡ್ ಕಾಲಾವಧಿ ವಿಶ್ವಕಪ್ ವೇಳೆಗೆ ಅಂತ್ಯಗೊಂಡಿತ್ತು.
ಕಳೆದೆರಡು ತಿಂಗಳಿಂದಲೇ ಬಿಸಿಸಿಐ ನೂತನ ಕೋಚ್ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿತ್ತು. ಗಂಭೀರ್ ನೂತನ ಕೋಚ್ ಆಗಿ ನೇಮಕವಾಗುವುದು ಕೆಲವು ಸಮಯದ ಹಿಂದೆಯೆ ದೃಢ’ಪಟ್ಟಿತ್ತಾದರೂ ‘ಆ ಕುರಿತಾದ ಪ್ರಕಟಣೆ ಹೊರಬಿದ್ದಿರಲಿಲ್ಲ.
ಇದೀಗ ಬಿಸಿಸಿಐ ಅಧಿಕೃತವಾಗಿ ಗಂಭೀರ್ ಆಯ್ಕೆಯನ್ನು ಪ್ರಕಟಿಸಿದೆ. ಗಂಭೀರ್ ಅವರು ಮೂರೂವರೆ ವರ್ಷಗಳ ಕಾಲ ಅಂದರೆ 2027ರ ವರೆಗೆ ಕೋಚ್ ಹುದ್ದೆ ನಿರ್ವಹಿಸಲಿದ್ದಾರೆ. ಟೆಸ್ಟ್ ಏಕದಿನ ತಂಡ ಮತ್ತು ಟಿ20 ತಂಡ ಈ ಮೂರೂ ಪ್ರಕಾರಗಳಲ್ಲೂ ಗಂಭೀರ್ ಕೋಚ್ ಆಗಲಿದ್ದಾರೆ.