ದುಬೈ : 8 ಬಾರಿ ಚಾಂಪಿಯನ್ ಭಾರತ ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಭಾನುವಾರ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಈ ವರೆಗೂ ಫೈನಲ್‌ನಲ್ಲಿ ಸೋಲೇ ಕಾಣದ ಟೀಂ ಇಂಡಿಯಾ, 9ನೇ ಟ್ರೋಫಿ ಎತ್ತಿ ಹಿಡಿಯುವ ಕಾತರದಲ್ಲಿದೆ.
ಪಾಕಿಸ್ತಾನ ವಿರುದ್ಧ ಸೋಲುವ ಮೂಲಕ ಟೂರ್ನಿಗೆ ಕಾಲಿರಿಸಿದ್ದ ಭಾರತ ಬಳಿಕ ಗುಂಪು ಹಂತದ ಎರಡೂ ಪಂದ್ಯಗಳಲ್ಲಿ ಗೆದ್ದು, ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿದೆ.
ಮತ್ತೊಂದೆಡೆ ಬಾಂಗ್ಲಾ ಗುಂಪು ಹಂತದಲ್ಲಿ 3ರಲ್ಲಿ 2 ಪಂದ್ಯ ಗೆದ್ದಿದ್ದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಹೊರದಬ್ಬಿತ್ತು. ಕಳೆದ ಬಾರಿ ಟೂರ್ನಿಯ ಫೈನಲ್‌ನಲ್ಲಿ ಯುಎಇಯನ್ನು ಸೋಲಿಸಿದ್ದ ಬಾಂಗ್ಲಾ ತಂಡ ಸತತ 2ನೇ ಬಾರಿ ಟ್ರೋಫಿ ಗೆಲ್ಲುವ ತವಕದಲ್ಲಿದೆ.
ಪಂದ್ಯ ಆರಂಭ: ಬೆಳಗ್ಗೆ 10.30ಕ್ಕೆ (ಭಾರತೀಯ ಕಾಲಮಾನ) ಪ್ರಸಾರ: ಸೋನಿ ಲೈವ್, ಸೋನಿ ಸ್ಪೋರ್ಟ್ಸ್.