ನವದೆಹಲಿ : ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹು ನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ. ಟೂರ್ನಿ ಮಾರ್ಚ್ 22ರಂದು ಆರಂಭಗೊಳ್ಳುವುದಾಗಿ ಸ್ವತಃ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆ ಇದ್ದರೂ ಟೂರ್ನಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಟೂರ್ನಿ ಆರಂಭದ ಬಗ್ಗೆ ಕೆಲ ತಿಂಗಳುಗಳಿಂದ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಮಾ.22ರಂದೇ ಈ ಬಾರಿ ಐಪಿಎಲ್ ಶುರುವಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬಗ್ಗೆ ಗೊಂದಲದಲ್ಲಿದ್ದ ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಈ ವರೆಗೂ ಟೂರ್ನಿ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಆರಂಭದಲ್ಲಿ ಟೂರ್ನಿಯ ಮೊದಲ 15 ದಿನದ ವೇಳಾ ಪಟ್ಟಿ ಪ್ರಕಟಿಸುತ್ತೇವೆ ಚುನಾವಣೆ ದಿನಾಂಕ ಘೋಷಣೆ ಬಳಿಕ ಇತರ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ