ಬೆಂಗಳೂರು : ಲೋಕಸಭೆ ಚುನಾವಣೆಗೆ ಅಖಾಡ ಸಿದ್ದಗೊಳ್ಳುತ್ತಿರುವಾಗಲೇ ದೇಶದೆಲ್ಲೆಡೆ ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಕ್ಷಣಗಣನೆ ಶುರುವಾಗಿದೆ. 2024ರ ಟೂರ್ನಿಗೆ ಚೆನ್ನೈನ ಟಿಪಾಕ್ ಕ್ರೀಡಾಂಗಣದಲ್ಲಿ ನಾಳೆ ಶುಕ್ರವಾರ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಒದಗಿಸಲಿದೆ. ಚುನಾವಣೆ ಹೊರತಾಗಿಯೂ ಭಾರತದಲ್ಲೇ ಐಪಿಎಲ್ ಆಯೋಜಿಸುವುದಾಗಿ ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದ್ದರೂ, 15 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದೆ. ಈ ಅವಧಿಯಲ್ಲಿ 21 ಪಂದ್ಯಗಳು ಆಯೋಜನೆಗೊಳ್ಳಲಿದ್ದು, ಉಳಿದ ಪಂದ್ಯಗಳ ವ ವೇಳಾಪಟ್ಟಿ ಶೀಘ್ರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 3 ಬಾರಿ ರನ್ನರ್-ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾ.22ರಂದು ಉದ್ಘಾಟನಾ ಸಮಾರಂಭದಲ್ಲಿ ಸೆಣಸಾಡಲಿವೆ.