ವಿಜಯಪುರ : ಉತ್ತರಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬಾಗಿನ ಅರ್ಪಿಸಿದರು.
ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ (ಮಧ್ಯಾಹ್ನ 3 ಗಂಟೆಗೆ) ಆಲಮಟ್ಟಿಗೆ ಆಗಮಿಸಿದ ಸಿಎಂ, ಕೃಷ್ಣಾನದಿಗೆ ಗಂಗಾಪೂಜೆ ನೆರವೇರಿಸಿದರು. ಬಳಿಕ ಆಂಜನೇಯ ಮೂರ್ತಿಗೆ ಪೂಜೆ ನೆರವೇರಿಸಿ, ಕೃಷ್ಣಗೆ ಬಾಗಿನ ಅರ್ಪಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಆರ್ .ಬಿ.ತಿಮ್ಮಾಪೂರ ಕೂಡ ಕೃಷ್ಣಾ ನದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು.
ಸಚಿವ ಶಿವಾನಂದ ಪಾಟೀಲ ಸೇರಿದಂತೆ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಶಾಸಕರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.