ಹೈದರಾಬಾದ್ : ಕಾಲ್ತುಳಿತದಿಂದ ಅಭಿಮಾನಿಯೊಬ್ಬರ ಸಾವಾದ ಸಂಬಂಧ ಬಂಧಿತರಾಗಿದ್ದ ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ತಾವು ಕಾನೂನಿಗೆ ಬದ್ಧವಾಗಿದ್ದು ತನಿಖೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಹಾಗೂ ಮೃತಳ ಕುಟುಂಬಕ್ಕೆ ಸಹಾಯ ಮಾಡುವ ಮಾತನ್ನು ಪುನರುಚ್ಚರಿಸಿದ್ದಾರೆ.
ಶುಕ್ರವಾರವೇ ಅಲ್ಲುಗೆ ಜಾಮೀನು ಸಿಕ್ಕಿತ್ತು ಆದರೆ ಜಾಮೀನು ಆದೇಶವು ಅಲ್ಲು ಇದ್ದ ಚಂಚಲ್‌ಗುಡ ಜೈಲಿಗೆ ಸಂಜೆಯೊಳಗೆ ತಲುಪಿರಲಿಲ್ಲ ಹೀಗಾಗಿ ಅವರು ರಾತ್ರಿ ಇಡೀ ಜೈಲಲ್ಲೇ ಕಳೆದರು. ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಬಿಡುಗಡೆ ಆದರು. ನಂತರ ಅವರನ್ನು ಸೆಲೆಬ್ರಿಟಿಗಳು ನಟರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಬಿಡುಗಡೆಯ ಬಳಿಕ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸ ಜುಬಿಲಿ ಹಿಲ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಲು ‘ಆತಂಕಗೊಳ್ಳುವಂಥದ್ದೇನೂ ಆಗಿಲ್ಲ. ಅಭಿಮಾನಿ ಮಹಿಳೆಯ ಸಾವು ಆಕಸ್ಮಿಕ ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಕಳೆದ 20 ವರ್ಷಗಳಿಂದ ಸಂಧ್ಯಾ ಥೇಟರ್ಗೆಗೆ ಹೋಗುತ್ತಿದ್ದರೂ ಇಂತಹ ಘಟನೆ ಸಂಭವಿಸಿರಲಿಲ್ಲ. ಈ ಘಟನೆ ನಡೆದಾಗ ನಾನು ಥೇಟರ್‌ನ ಒಳಗೆ ಪರಿವಾರದೊಂದಿಗೆ ಸಿನಿಮಾ ವೀಕ್ಷಿಸುತ್ತಿದ್ದೆ. ಮೃತ ಮಹಿ ಳೆಯ ಪರಿವಾರಕ್ಕೆ ನಾನು ಮತ್ತೊಮ್ಮೆ ಸಂತಾಪ ಸೂಚಿಸುತ್ತೇನೆ ಹಾಗೂ ಅವರೊಂದಿಗೆ ಸದಾ ಇದ್ದು ಸಹಾಯ ಮಾಡಲು ಸಿದ್ಧನಿದ್ದೇನೆ’ ಎಂದರು ಜೊತೆಗೆ ಈ ಸಮುಯದಲ್ಲಿ ತಮ್ಮ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಅಲ್ಲು ಕೃತಜ್ಞತೆ ಸಲ್ಲಿಸಿದರು