ಅಂಕೋಲಾ : ಪರಿಸರ ಸ್ನೇಹಿ ಗ್ರೀನ್ ನ್ಯಾನೋ ತಂತ್ರಜ್ಞಾನದಲ್ಲಿ ಅಧ್ಯಯನ ನಡೆಸಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕೇಂದ್ರದ ಮಾಜಿ ಸಚಿವರು, ಉತ್ತರ ಕನ್ನಡ ಜಿಲ್ಲಾ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಗುಜರಾತಿನ ಇಂಡಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ
ಅಹಮದಾಬಾದಿನಲ್ಲಿರುವ ಇಂಡಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅನಂತಕುಮಾರ್ ಹೆಗಡೆ ಅವರಿಗೆ ಈ ಪದವಿ ಪ್ರದಾನ ಮಾಡಲಾಗಿದೆ.
ಅನಂತಕುಮಾರ್ ಹೆಗಡೆ ಅವರು ತಮ್ಮ ಕದಂಬ ಸಂಸ್ಥೆಯ ಸಂಶೋಧನಾ ಘಟಕದ ಮೂಲಕ ಹಲವಾರು ವಿಜ್ಞಾನಿಗಳ ಸಹಯೋಗದೊಂದಿಗೆ ನಿರಂತರ ಅಧ್ಯಯನ ನಡೆಸಿ ಪ್ರಕೃತಿಯ ಮೂಲ ಸತ್ವವನ್ನು ಔಷಧಿಯಾಗಿ ಜನರಿಗೆ ಆರೋಗ್ಯ ಅಮೃತದಂತೆ ನೀಡುವ ತಮ್ಮ ಯೋಚನೆಯನ್ನು ಸಾಕಾರಗೊಳಿಸುವಲ್ಲಿ ಮಾಡಿರುವ ಸಾಧನೆಯನ್ನು ಇಂಡಸ್ ವಿ.ವಿ.ಗುರುತಿಸಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ, ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅನಂತಕುಮಾರ್ ಹೆಗಡೆ ಅವರು ರಾಜಕೀಯದ ಹೊರತಾಗಿ ತಮ್ಮ ಕದಂಬ ಸಂಸ್ಥೆಯ ಮೂಲಕ ಅನೇಕ ಜನಪರ, ರೈತಪರ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡವರು. ಹೊಸ ತಂತ್ರಜ್ಞಾನವನ್ನು ಸ್ವತಃ ಅಧ್ಯಯನ ನಡೆಸಿ ಭವಿಷ್ಯದ ಪೀಳಿಗೆಗೆ ನೆರವಾಗುವ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ