ಬೆಂಗಳೂರು : ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ತೃತೀಯ ಟಾಪರ್‌ಗಳಲ್ಲಿ ಒಬ್ಬರಾದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಪ್ರತ್ಯೇಕವಾಗಿ ಸನ್ಮಾನಿಸಿ ಪ್ರತ್ಯೇಕ ಆರ್ಥಿಕ ನೆರವು ಘೋಷಿಸಿದರು.
ಮುಖ್ಯಮಂತ್ರಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಈ ಇಬ್ಬರೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ, ಉಪ ಮುಖ್ಯಮಂತ್ರಿ ಅವರು ತಮ್ಮ ಸದಾಶಿವ ನಗರದ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದರು. ಜೊತೆಗೆ ವಿದ್ಯಾರ್ಥಿಗಳ ಪೋಷಕರನ್ನೂ ಅಭಿನಂದಿಸಲಾಯಿತು.
ಪ್ರಥಮ ಟಾಪರ್ (625 ಅಂಕ) ಅಂಕಿತಾಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಬ್ಬರೂ ವೈಯಕ್ತಿಕವಾಗಿ ತಲಾ 5 ಲಕ್ಷ ರು., ತೃತೀಯ ಟಾಪರ್ (623 ಅಂಕ) ನವನೀತ್ ಮುಖ್ಯಮಂತ್ರಿ ಅವರು 3 ಲಕ್ಷ ರು. ಮತ್ತು ಉಪ ಮುಖ್ಯಮಂತ್ರಿ ಅವರು 2 ಲಕ್ಷ ರು. ನೆರವನ್ನು ಘೋಷಿಸಿ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು