ಬೆಂಗಳೂರು : ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ನಗರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮಾಸಿಕ 10,000 ರು. ಗೌರವಧನ ನೀಡುವುದು ಸೇರಿ ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕಾರ್ಯಕರ್ತೆಯರು ಹಿಂಪಡೆದಿದ್ದಾರೆ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯ ಅಧಿಕಾರಿಗಳು ಹಾಗೂ ಪ್ರತಿಭಟನಾನಿರತ ಕಾರ್ಯಕರ್ತೆಯರ ಸಂಘದ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಸಭೆ ನಡೆಸಿ ಪ್ರತಿ ತಿಂಗಳು 5,000 ರು. ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರು. ಅನ್ನು ಏ.1ರಿಂದ ನೀಡಲಾಗುವುದು ಎಂದು ಘೋಷಿಸಿದರು.
ಇನ್ನು ಆರೋಗ್ಯ ಸೇವೆಗಳ ಕುರಿತಾದ ಮಾಹಿತಿಯನ್ನು ಅಪ್ ಲೋಡ್ ಮಾಡಲು ಇರುವ ಪೋರ್ಟಲ್ ಸಮಸ್ಯೆಯನ್ನು ಪರಿಹರಿಸಬೇಕು. ಆರೋಗ್ಯ ಸಮಸ್ಯೆ ಎದುರಾದರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವಧನ ನಿಲ್ಲಿಸದೆ ರಜೆ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಬಜೆಟ್ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.