ಬೆಂಗಳೂರು : ‘ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ರಾಜ್ಯ ಸರ್ಕಾರದ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್ಐಎಯಿಂದ ತನಿಖೆ ಆಗಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ. ಶುಕ್ರವಾರ ಮಾತನಾಡಿ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಸಮಾಜದ ಎಲ್ಲ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್ ಐಎಗೆ ಕೊಡಿ ಎಂದು ಆಗ್ರಹಿಸಿದರು.
ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆ ಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ. ಹಿಂದುಗಳ ಮೇಲೆ ಬಲಾತ್ಕಾರ ಆಗುತ್ತಿದೆ. ದಾಳಿ ನಡೆಯುತ್ತಿದೆ. ಪೊಲೀಸರ ಕಣ್ಣ ಮುಂದೆ ಇದೆಲ್ಲ ನಡೆದರೂ ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ ಎಂದರು.