ವಿಧಾನಸಭೆ : ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಬಡವರಿಗೆ 5 ಲಕ್ಷ ರೂ. ನೆರವು ನೀಡುವಂತೆ ಪ್ರತಿಪಕ್ಷ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯಾದ್ಯಂತ ಮುಂಗಾರು ಮಳೆ ಅರ್ಭಟಿಸುತ್ತಿದೆ. ನಾನು ಈಗಾಗಲೇ ಶಿಕಾರಿಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮಳೆ ಜಾಸ್ತಿಯಾದ ಪರಿಣಾಮ ಮನೆಗಳು, ಮನೆ ಗೋಡೆಗಳು ಕುಸಿದು ಬೀಳುತ್ತಿವೆ. ಅಂಕೋಲಾ ತಾಲೂಕಿನಲ್ಲಿ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.
ಹಿಂದೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡವರಿಗೆ 1.20ಲಕ್ಷ ರೂ. ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ 40 ಸಾವಿರ ರೂ. ಕೊಡಬೇಕಿತ್ತು. ಬಡವರಿಗೆ ನೆರವಾಗುವ ದೃಷ್ಟಿಯಿಂದ ಸಹಾನುಭೂತಿ ನೆಲೆಯಲ್ಲಿ ಸಂಪೂರ್ಣ ಮನೆ ಹಾನಿಯಾದವರಿಗೆ 5 ಲಕ್ಷ ರೂ., ಭಾಗಶಃ ಹಾನಿಯಾದವರಿಗೆ 1 ಲಕ್ಷ ರೂ. ಮತ್ತು ನೆರೆ ನೀರು ನುಗ್ಗಿದ ಮನೆಗಳಿಗೆ 10 ಸಾವಿರ ರೂ. ನೀಡುವ ನಿರ್ಧಾರವನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡಿತ್ತು ಎಂದು ವಿವರಿಸಿದರು.