ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೇರೆಡೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಅವರ ನಾಲ್ವರು ಆಪ್ತರನ್ನು ಸಿನಿಮೀಯ ಶೈಲಿಯಲ್ಲಿ ಗುರುವಾರ ನಸುಕಿನಲ್ಲಿ ಬಿಗಿ ಭದ್ರತೆಯೊಂದಿಗೆ ಪೊಲೀಸರು ಸ್ಥಳಾಂತರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಹೊಸ ಜೈಲಿಗೆ ಕಾಲಿಟ್ಟ ಕೂಡಲೇ ದರ್ಶನ್ ಗ್ಯಾಂಗ್ನ ವಿಚಾರಣಾಧೀನ ಕೈದಿ ಸಂಖ್ಯೆ ಸಹ ಬದಲಾಗಿದ್ದು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರಿಗೆ 511 ಸಂಖ್ಯೆಯನ್ನು ಕಾರಾಗೃಹದ ಅಧಿಕಾರಿಗಳು ಕೊಟ್ಟಿದ್ದಾರೆ. ಮೊದಲ ಹಂತದಲ್ಲಿ ದರ್ಶನ್ ಹಾಗೂ ಅವರ ಆಪ್ತರಾದ ಪ್ರದೂಪ್, ಲಕ್ಷ್ಮಣ್, ಜಗದೀಶ್ ಹಾಗೂ ಧನರಾಜ್ ಸ್ಥಳಾಂತರಗೊಂಡಿದ್ದು, ಇನ್ನುಳಿದ ಐವರು ಇಂದು ಶುಕ್ರವಾರ ಎತ್ತಂಗಡಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.