ಬೆಂಗಳೂರು : ಶೃಂಗೇರಿ ಶಾರದಾಪೀಠದ ಜಗದ್ಗುರು ಗಳಾದ ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಅ.26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಕಲ್ಯಾಣ ವೃಷ್ಟಿಸ್ತವ’ ಮಹಾಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎ.ನಾಗಾನಂದ, ಕಾರ್ಯಕ್ರಮದ ಅಂಗವಾಗಿ ‘ನಮಃ ಶಿವಾಯ’ ಸ್ತೋತ್ರದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸ್ವಾಮೀಜಿಗಳು ಸನ್ಯಾಸ ಸ್ವೀಕರಿಸಿ 50 ವರ್ಷವಾಗುತ್ತಿರುವುದರಿಂದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಭಕ್ತರು ಸೇರಿದಂತೆ ಎರಡು ಲಕ್ಷಕ್ಕೂ ಅಧಿಕ ಜನರು ಆಗಮಿಸಲಿದ್ದು, ವೇದಾಂತ ಭಾರತಿ ಸಂಸ್ಥೆಯಿಂದ ಶಂಕರಾಚಾರ್ಯರ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ. ಏಕಕಂಠದಲ್ಲಿ ಸ್ತೋತ್ರಗಳು ಮೊಳಗಲಿವೆ. ಇದು ವಿನೂತನ ಕಾರ್ಯಕ್ರಮವಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯಾಗಲಿದೆ ಎಂದು ವಿವರಿಸಿದರು.