ಬೆಂಗಳೂರು : ಮುಡಾ ಪ್ರಕರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರ ವಿರುದ್ದ ಭ್ರಷ್ಟಾಚಾರದ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿ ಕಾನೂನು ಕುಣಿಕೆಗೆ ಸಿಲುಕಿಸಲು ಕಾಂಗ್ರೆಸ್ ನಾಯಕತ್ವ ಕೂಡ ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರಾದ ಬಿ.ಎಸ್.ಯಡಿ ಯೂರಪ್ಪ, ಪ್ರತಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದರಾದ ಸುಧಾಕರ್ ಸೇರಿದಂತೆ ಬಿಜೆಪಿ ನಾಯಕರ ಅಕ್ರಮ ಹಾಗೂ ಭ್ರಷ್ಟಾಚಾರದ ಪ್ರಕರಣಗಳನ್ನು ಪಟ್ಟಿ ಮಾಡಿ, ಪ್ರತಿಯೊಬ್ಬರ ಪ್ರಕರಣಗೆಳನ್ನು ನಿಭಾಯಿಸಲು ಪ್ರತ್ಯೇಕ ವಕೀಲರ ತಂಡವನ್ನು ನೇಮಿಸಲು ಸಿದ್ಧತೆ ಆರಂಭಗೊಂಡಿದೆ.
ಬಿಜೆಪಿ ನಾಯಕರ ವಿರುದ್ಧದ ಬಾಕಿ ಇರುವ ಪ್ರಕರಣಗಳನ್ನು ಪಟ್ಟಿ ಮಾಡುವುದು, ಕಾನೂನು ಕ್ರಮಕ್ಕೆ ಮುಂದಾಗುವುದು. ಒಂದು ವೇಳೆ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದ್ದರೆ ಅದನ್ನು ತೆರವುಗೊಳಿಸಲು ಅಗತ್ಯ ಕಾನೂನು ಹೋರಾಟ ಆರಂಭಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಪ್ರಕರಣಕ್ಕೂ ಪ್ರತ್ಯೇಕವಾಗಿ ಹಿರಿಯ ವಕೀಲರ ತಂಡ ರಚಿಸಲು ಕಾಂಗ್ರೆಸ್ ಚರ್ಚೆ ನಡೆಸಿದೆ.