ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತಾಗಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದಲ್ಲಿ ನಡೆಯುತ್ತಿದ್ದ ಪರಿಷ್ಕರಣೆ ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬಿಪಿಎಲ್ ಕಾರ್ಡ್ಗಳ ವಿತರಣೆ ಪ್ರಮಾಣ ಶೇ.66ರಷ್ಟಿದೆ. ಪ್ರಸಕ್ತ ರಾಜ್ಯದಲ್ಲಿ 1.13 ಕೋಟಿ ಬಿಪಿಎಲ್ ಕಾರ್ಡ್ಗಳಿವೆ ಎಂದು ಹೇಳಿದರು. ಆದಾಯ ತೆರಿಗೆದಾರರು ಮತ್ತು ಸರ್ಕಾರಿ ನೌಕರರ ಒಟ್ಟು 1.02 ಲಕ್ಷ ಕಾರ್ಡುಗಳಲ್ಲಿ 76,176 ಕಾರ್ಡುಗಳನ್ನು ಪರಿಶೀಲಿಸಲಾಗಿದೆ. ಅಲ್ಲದೇ 17,710 ಕಾರ್ಡುಗಳ ಪರಿಶೀಲನೆ ಪ್ರಗತಿಯಲ್ಲಿದೆ. ‘ಈ ಪೈಕಿ 68,017 ಕಾರ್ಡ್ಗಳನ್ನು ಅಮಾನತು ಮಾಡಿ ಎಪಿಎಲ್ಗೆ ಸೇರಿಸಲಾಗಿದೆ. 16,806 ಅರ್ಹ ಕಾರ್ಡ್ ಗಳನ್ನು ಬಿಪಿಎಲ್ ನಲ್ಲಿ ಮುಂದುವರಿಸಲಾಗಿದೆ ಎಂದು ವಿವರಿಸಿದರು.