ಉಡುಪಿ : ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ, ಪಕ್ಷದ ಅಭ್ಯರ್ಥಿ ಗೆದ್ದರೆ ತಾವೇ ಗೆದ್ದಂತೆ ಎಂದು ಅವರು ಸಂಭ್ರಮಿಸುತ್ತಾರೆ. ಈ ಬಾರಿ ವಿಧಾನ ಪರಿಷತ್ತಿಗೆ ಸಾಕಷ್ಟು ಹಿರಿಯ ಆಕಾಂಕ್ಷಿಗಳಿದ್ದರು. ಆದರೆ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದ ಮೇಲೆ ಒಪ್ಪಿಕೊಂಡು, ಅವರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಅವರು ಸೋಮವಾರ ಉಡುಪಿಯಲ್ಲಿ ವಿಧಾನಪರಿಷತ್ ಚುನಾವಣೆ ಪ್ರಯುಕ್ತ ಪಕ್ಷದ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದರು.
ಗೆಲುವು ತಪ್ಪಿಸಲು ಸಾಧ್ಯವಿಲ್ಲ
ಕೆಲವರು ಅವಕಾಶ ಸಿಕ್ಕಿಲ್ಲ ಎಂದು ನಾಯಕರನ್ನು ಟೀಕಿಸುತ್ತಿದ್ದಾರೆ. ಸಂಘಟನೆಗಿಂತ ಸ್ವಾರ್ಥದ ಬಗ್ಗೆ ಆಲೋಚಿಸಿದರೆ ದುರಂತವಾಗುತ್ತದೆ. ಆದರೆ ನೈರುತ್ಯ ಕ್ಷೇತ್ರದಿಂದ ಡಾ. ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೇಗೌಡರು ಗೆಲ್ಲುವುದನ್ನು ಯಾರೂ ತಪ್ಪಿಸಿಲಿಕ್ಕಾಗುವುದಿಲ್ಲ ಎಂದು ಬಂಡಾಯ ಅಭ್ಯರ್ಥಿಗಳಿಗೆ ಸಂದೇಶ ನೀಡಿದರು.
ವಿಧಾನ ಪರಿಷತ್ ಪದವಿಧರ ಕ್ಷೇತ್ರಕ್ಕೆ ಟಿಕೆಟ್ ಸಿಕ್ಕಿಲ್ಲ ಎಂದು ಉಡುಪಿ ಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರಿಗೆ ಪಕ್ಷದಿಂದ ಯಾವುದೇ ಅನ್ಯಾಯವಾಗಿಲ್ಲ ಅವರಿಗೆ ಎಲ್ಲ ಅವಕಾಶಗಳನ್ನು ನೀಡಲಾಗಿತ್ತು. ಅವುಗಳನ್ನೆಲ್ಲ ಅವರು ಬಳಸಿಕೊಂಡಿದ್ದಾರೆ, ಆದರೆ ಈಗ ಎಡವಿದ್ದಾರೆ. ವಿಧಾನ ಪರಿಷತ್ತೆನಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಬರುತ್ತೇವೆ ಎಂದು ಪಕ್ಷದಿಂದ ಉಚ್ಚಾಟನೆಗೊಂಡಿರುವ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ ಅವರನ್ನು ಗೆಲ್ಲಿಸುವಂತಹ ಮೂರ್ಖರು ನಮ್ಮ ಪಕ್ಷದ ಮತದಾರರಲ್ಲ. ಆದ್ದರಿಂದ ಬಂಡಾಯ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಹಿಸಿದ್ದರು
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಚಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ಹರೀಶ್ ಪೂಂಜ, ಡಿ.ಎಸ್.ಅರುಣ್, ರಾಜ್ಯ ಪ್ರಕೋಷ್ಠ ಸಂಯೋಜಕ ದತ್ತಾತ್ರಿ, ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಎಸ್.ಎಲ್. ಭೋಜೇಗೌಡ ಹಾಗೂ ಡಾ.ಧನಂಜಯ ಸರ್ಜಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು