ಹುಬ್ಬಳ್ಳಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ ಈಗಾಗಲೇ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ನಡೆಯುವಾಗ ಹೇಳಿಕೆ ನೀಡಲು ಬರುವುದಿಲ್ಲ. ಆದ್ದರಿಂದ ಹೆಚ್ಚು ಮಾತನಾಡಲ್ಲ ಪೊಲೀಸರು ತಮ್ಮ ಕೆಲಸ ಮಾಡಬೇಕಾಗುತ್ತದೆ ವಿಧಾನ ಪರಿಷತ್ ಸಭಾಪತಿ ಅವರ ಕೆಲಸ ಅವರು ಮಾಡುತ್ತಾರೆ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಸಾಧಕ ಬಾಧಕ ತಿಳಿದುಕೊಂಡು ಸಭಾಪತಿ ಅನುಮತಿ ಪಡೆದು ನಿಯಮಾನುಸಾರ ಪ್ರಕರಣ ದಾಖಲಿಸಬೇಕು ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ ಆದ್ದರಿಂದ ವಿಳಂಬವಾಗಿರಬಹುದು ಸತ್ಯಾಸತ್ಯತೆ ನೋಡಬೇಕಾಗುತ್ತದೆ ಎಂದು ಹೇಳಿದರು.
ಗೃಹ ಇಲಾಖೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅವರಿವರ ಮಾತು ಕೇಳಿಕೊಂಡು ನಡೆಸಲು ಸಾಧ್ಯವಿಲ್ಲ ಪೊಲೀಸ್ ಇಲಾಖೆಗೆ ತನ್ನದೇ ಆದ ಜವಾಬ್ದಾರಿಗಳಿವೆ. ಏನೇ ಕ್ರಮ ಕೈಗೊಳ್ಳಬೇಕಿದ್ದರೂ ಅದಕ್ಕೆ ಸಿಎಂ ಹಾಗೂ ಗೃಹ ಸಚಿವರೇ ಆದೇಶ ನೀಡಬೇಕು. ಈ ಇಲಾಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು.