ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ‘(ಮುಡಾ)ದ ನಿವೇಶನ ಹಂಚಿಕೆ ವಿವಾದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಹಗೆತನವೇ ಕಾರಣ ಎಂದು ಕಟುವಾಗಿ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರದಿಂದ ‘ಈ ವಿವಾದ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾದಿಂದ ತಮ್ಮ ಪತ್ನಿಗೆ ನಿವೇಶನ ಹಂಚಿಕೆ ಮಾಡಿರುವುದನ್ನು ಹಗರಣವಾಗಿ ಬಿಂಬಿಸುತ್ತಿರುವ ವಿರೋಧ ಪಕ್ಷಗಳ ನಡೆಯ ವಿರುದ್ದ ಹಾಗೂ ಇಡೀ ಪ್ರಕರಣದ ವಿವರವನ್ನು ನೀಡಲು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹಾಗೂ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ನಾಚಿಕೆ ಮಾನ-ಮರ್ಯಾದೆಯಿಲ್ಲ. 1983ರಲ್ಲೇ ನಾನು ಶಾಸಕ, 1984ರಲ್ಲಿ ಸಚಿವನಾದವನು. 40 ವರ್ಷಕ್ಕಿಂತ ಹೆಚ್ಚಿನ ಕಾಲ ರಾಜಕೀಯ ಜೀವನ ನಡೆಸಿದ್ದೇನೆ. ಈವರೆಗೆ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದ ಅವರು ಇದು ಬಿಜೆಪಿಯವರ ಕುತಂತ್ರ ಎಂದರು