ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನ ಆರೋಪಿಯಾಗಿದ್ದು, ಇವರ ವಿರುದ್ಧವೂ ತನಿಖೆ ಯಾಗಬೇಕು, ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಶಾಸಕ ಸಿ ಟಿ ರವಿ ಆಗ್ರಹಿಸಿದ್ದಾರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಬಿಜೆಪಿ ಶುಕ್ರವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.
ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡುವುದನ್ನು ಬಿಟ್ಟು 60 ಕೋಟಿ ರೂ. ಕೊಟ್ಟರೆ ನಿವೇಶನ ಬಿಟ್ಟುಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ದೂರಿದರು. ಸುಮಾರು 4 ರಿಂದ 5 ಸಾವಿರ ಕೋಟಿ ರೂ. ಮೌಲ್ಯದ ನಿವೇಶನಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿರುವ ಹಗರಣ ಇದಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಎದುರಿನವರನ್ನು ಬುದ್ಧಿವಂತಿಕೆಯಿಂದ ಯಾಮಾರಿಸುವ ಪ್ರಯತ್ನ ನಡೆಸಿದ್ದಾರೆ. ಅವರದ್ದು ಪ್ರಾಮಾಣಿಕತೆಯಿಂದ ಕೂಡಿದ ಸಮರ್ಥನೆ ಅಲ್ಲ ಎಂದರು. ಒಮ್ಮೆ ನೋಟಿಫಿಕೇಶನ್ ಆದ ಜಮೀನನ್ನು ಕೊಂಡುಕೊಳ್ಳುವುದೇ ಅಪರಾಧ. ಆದರೂ ಮುಖ್ಯಮಂತ್ರಿಗಳ ಭಾಮೈದ ಅದನ್ನು ಖರೀದಿಸಿದ್ದಾರೆ ಎಂದರು