ಬೆಂಗಳೂರು: ಕಾಂಗ್ರೆಸ್ಸಿಗರದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯೇ ಅಥವಾ ಸರ್ಕಾರಿ ಪ್ರಾಯೋಜಿತ ಬೆದರಿಕೆಯೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟದ್ದನ್ನೇ ಅಪರಾಧ ಎಂದು ಬಿಂಬಿಸಿ ಸರ್ಕಾರವೇ ನೇತೃತ್ವ ವಹಿಸಿ ದಂಗೆ ಎಬ್ಬಿಸುವ ಮಾತು ದುರದೃಷ್ಟಕರ ಮತ್ತು ಸಂವಿಧಾನವಿರೋಧಿ ಎಂದು ಆಕ್ಷೇಪಿಸಿದರು.
ಒಬ್ಬ ವಿಧಾನ ಪರಿಷರ್ ಸದಸ್ಯ ಐವನ್ ಡಿಸೋಜ ಬಾಂಗ್ಲಾ ಮಾದರಿ ದಾಳಿ ಮಾಡಬೇಕಾಗುತ್ತದೆ ಎನ್ನುತ್ತಾರೆ. ಇದರರ್ಥ ಏನು? ಇನ್ನೊಬ್ಬರು ರಾಜ್ಯಪಾಲರು ಹಾಸಿಗೆ ದಿಂಬು ಕಟ್ಟಿಕೊಂಡು ಓಡ ಬೇಕಾಗುತ್ತದೆ ಎನ್ನುತ್ತಾರೆ. ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೇ ಎಂದು ಪ್ರಶ್ನಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ಹೋದಾಗ ಅಲ್ಲಿ ಆ.29ರವರೆಗೆ ತಡೆಯಾಜ್ಞೆ ನೀಡಿದ್ದಾರೆ. ಹಾಗಿದ್ದರೆ ಈ ದೂರುದಾರರು ನ್ಯಾಯಾಧಿಶರ ವಿರುದ್ಧ ಪ್ರತಿಭಟನೆ ಮಾಡಿದರೆ ಹೇಗಿದ್ದೀತು ಎಂದು ಕೇಳಿದರು.