ಬೆಂಗಳೂರು : ನಾಡಿನ ಎಲ್ಲ ಸಮುದಾಯಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ (ಜಾತಿ ಆಧಾರಿತ ಜನಗಣತಿ) ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆ ಇಂದು ಗುರುವಾರ ಸಂಜೆ 4.00ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.
ಜಾತಿ ಗಣತಿ ವರದಿಯ ಮುಖ್ಯಾಂಶಗಳ ಸಂಕ್ಷಿಪ್ತ ವರದಿ ಕಳೆದ ವಾರವೇ ಸಚಿವರ ಕೈ ಸೇರಿದ್ದು, ವರದಿ ಅಧ್ಯಯನ ನಡೆಸಿ ಗುರುವಾರದ ಸಂಪುಟ ಸಭೆಯಲ್ಲಿ ಅಭಿಪ್ರಾಯ ಮಂಡಿಸುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ವರದಿಯ ಮುಖ್ಯಾಂಶಗಳು ಬಹಿರಂಗಗೊಂಡು ಸಮುದಾಯಗಳ ಮುಖಂಡರ ಅವಗಾಹನೆಗೂ ಲಭ್ಯವಾದವು.
ಇಷ್ಟಾಗುತ್ತಿದ್ದಂತೆಯೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ಈ ವರದಿ ಪರ ಪ್ರಬಲ ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ ಸಮುದಾಯದ ಮುಖಂಡರು ಹಾಗೂ ಶಾಸಕರು ತಮ್ಮ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಸಮುದಾಯದ ಹಿತ ಕಾಪಾಡಲು ಸಚಿವ ಸಂಪುಟ ಸಭೆಯಲ್ಲಿ ಯಾವ ರೀತಿ ವಾದ ಮಂಡಿಸಬೇಕು ಎಂಬ ಮಾಹಿತಿಯನ್ನು ಈಗಾಗಲೇ ಸಚಿವರಿಗೆ ನೀಡಿದ್ದಾರೆ.
ಯಾರಿಗೂ ಅನ್ಯಾಯ ಆಗಲು ಬಿಡಲ್ಲ : ಸಿದ್ದರಾಮಯ್ಯ
ಇದು ಜಾತಿಗಣತಿ ಅಲ್ಲ. ಸಾಮಾಜಿಕ-ಆರ್ಥಿಕ ಸಮೀಕ್ಷೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಸುತ್ತೇವೆ. ವರದಿ ಜಾರಿಯಿಂದ ಯಾರಿಗೂ, ಯಾವ ಸಮುದಾಯಕ್ಕೂ ಅನ್ಯಾಯ ಆಗಲ್ಲ. ಅನ್ಯಾಯ ಆಗಲು ನಾವು ಬಿಡುವುದಿಲ್ಲಎಂದಿದ್ದಾರೆ

