ಬೀದರ್ : ಸರ್ಕಾರದ ಪರಿಹಾರ ಮೊತ್ತ ಅಷ್ಟೇ ಅಲ್ಲ, ವಿರೋಧ ಪಕ್ಷ ಬಿಜೆಪಿ ನಾಯಕರು ನೀಡಲು ಮುಂದಾಗಿದ್ದ ಹಣಕಾಸಿನ ನೆರವನ್ನೂ ಸರಾಸಗಟಾಗಿ ತಿರಸ್ಕರಿಸಿರುವ ಮೃತ ಗುತ್ತಿಗೆದಾರ ಸಚಿನ್ ಪಂಚಾಳ ಅವರ ಕುಟುಂಬಸ್ಥರು ರಾಜ್ಯ ಪೊಲೀಸರ ಮೇಲೆ ನಂಬಿಕೆಯಿಲ್ಲ ಸಿಬಿಐ ತನಿಖೆ ಮೂಲಕ ನ್ಯಾಯ ಒದಗಿಸಿಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ ಕಿರುಕುಳದ ಬಗ್ಗೆ ಡೆತ್ ನೋಟಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಂಚಾಳ ಅವರ ತಂದೆ ಮೋನಪ್ಪ, ಸಹೋದರಿಯರಾದ ಸಂಗೀತಾ, ಸವಿತಾ, ಸುರೇಖಾ ಹಾಗೂ ಸುಜಾತಾ ಸೇರಿ ಕುಟುಂಬದವರು ನಮಗೆ ಹಣಕ್ಕಿಂತ ಮುಖ್ಯವಾಗಿ ನಮ್ಮ ಸಚಿನ್ ಸಾವಿಗೆ ನ್ಯಾಯ ಬೇಕಿದೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಸೂಕ್ತವಾದ ಶಿಕ್ಷೆ ಆಗಬೇಕಿದೆ ಎಂದು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಮನೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸರ್ಕಾರದ ಹಾಗೂ ಖಾಸಗಿಯಾಗಿ ಸಚಿನ್ ಕುಟುಂಬಕ್ಕೆ ಒಟ್ಟು 10 ಲಕ್ಷ ರು.ಗಳ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ ಭಾನುವಾರ ಸಂಜೆ ಸಾಂತ್ವನ ಹೇಳಲು ಮನೆಗೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದ ನಿಯೋಗದವರು ಪಕ್ಷದ ಪರವಾಗಿ ನೀಡಲು ಮುಂದಾಗಿದ್ದ ಪರಿಹಾರ ಮೊತ್ತವನ್ನು ಪಡೆಯಲೂ ಸಚಿನ್ ಸಹೋದರಿಯರು ನಿರಾಕರಿಸಿದ್ದಾರೆ.