ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮ್ಮ ಭೇಟಿಗೆ ಆಗಮಿಸಿದ್ದ ನಟರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಸ್ನೇಹಿತರನ್ನು ಕಾಣಲು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ತೂಗುದೀಪ ನಿರಾಕರಿಸಿದ್ದಾರೆ. ದರ್ಶನ್ ಅವರನ್ನು ಭೇಟಿಯಾಗಲು ನಿರ್ದೇಶಕರಾದ ಜೋಗಿ ಪ್ರೇಮ್, ಕಾಟೇರ ತರುಣ್ ಸುಧೀರ್ ಹಾಗೂ ಕೆಲ ನಿರ್ಮಾಪಕರು ತೆರಳಿದ್ದರು. ಆದರೆ ತಮ್ಮ ಪತ್ನಿ ಹಾಗೂ ಪುತ್ರನ ಹೊರತುಪಡಿಸಿ ಇನ್ನುಳಿದವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸಿದ್ದಾರೆ. ಹೀಗಾಗಿ ಜೈಲಿನಲ್ಲಿರುವ ತಮ್ಮ ಗೆಳೆಯನ ‘ದರ್ಶನ’ ಸಿಗದೆ ಚಲನ ಚಿತ್ರರಂಗದ ಸ್ನೇಹಿತರು ಬೇಸರದಲ್ಲಿ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ವಾರದಲ್ಲಿ 2 ಬಾರಿ ಅವಕಾಶ :
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಅವರ ಕುಟುಂಬದವರು ಹಾಗೂ ಸ್ನೇಹಿತರು ಸೇರಿದಂತೆ ಹೊರಗಿನವರಿಗೆ ವಾರದಲ್ಲಿ 2 ಬಾರಿ ಭೇಟಿಗೆ ಅವಕಾಶವಿದೆ. ಈ ನಿಯಮವೇ ದರ್ಶನ್ಗೂ ಅನ್ವಯವಾಗಲಿದೆ. ಈ ಹಿನ್ನಲೆಯಲ್ಲಿ ದರ್ಶನ್ ಭೇಟಿಗೆ ಬರುವ ಅವರ ಅಭಿಮಾನಿಗಳು ಸೇರಿ ಹೊರಗಿನವರಿಗೆ ಅನುಮತಿ ನೀಡುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ.