ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮು ಗಲಭೆ ನಡೆಯಬಾರದು. ಅದಕ್ಕಾಗಿ ಎಲ್ಲ ರಾಜಕಾರಣಿಗಳು ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಮಂಗಳೂರಿನ ಪಡೀಲ್‌ನಲ್ಲಿ 75 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ವನ್ನು ಶುಕ್ರವಾರ ಉದ್ಘಾಟಿಸಿ, ಪೋಡಿ ಮುಕ್ತ ಅಭಿಯಾನದಲ್ಲಿ 8 ಸಾವಿರಕ್ಕೂ ಅಧಿಕ ಜನರಿಗೆ ಆರ್‌ಟಿಸಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸೌಹಾರ್ದತೆಯ ಪಾಠ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ನಂ.1 ಸ್ಥಾನದಲ್ಲಿದೆ. ಆದರೆ ಇಲ್ಲಿ ಶಾಂತಿ ಸ್ಥಾಪನೆಯ ಅಗತ್ಯವಿದೆ. ಭ್ರಾತೃತ್ವದಿಂದ ಇರುವ ಸಂದೇಶವನ್ನು ಸಂವಿಧಾನವೇ ನೀಡಿದೆ. ಇದರ ಜತೆಗೆ ಸಹಿಷ್ಣುತೆ, ಸಹಬಾಳ್ವೆಯೂ ಇರಬೇಕು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ. ದ.ಕ. ಜಿಲ್ಲೆ ಶಾಂತಿಯ ತೋಟವಾಗಲಿ. ಸಹಬಾಳ್ವೆಗೆ ಎಲ್ಲ ರಾಜಕಾರಣಿಗಳೂ ಶ್ರಮಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.
ಮನುಷ್ಯ ಮನುಷ್ಯನನ್ನೇ ದ್ವೇಷಿಸುವ ವಾತಾವರಣ ಎಂದೂ ನಿರ್ಮಾಣವಾಗಬಾರದು. ಪರಸ್ಪರ ಪ್ರೀತಿಸುವ, ಸೌಹಾರ್ದತೆಯ ವಾತಾವರಣವನ್ನು ನಿರ್ಮಾಣ ಮಾಡುವುದೇ ರಾಜಕಾರಣಿಗಳ ಕೆಲಸ. ಜತೆಗೆ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸುವ ಕೆಲಸವನ್ನೂ ಮಾಡಬೇಕು ಎಂದು ಕಿವಿಮಾತು ಹೇಳಿದರು. ಸಮಾನತೆಯ ಆಶಯ ಹೊಂದಿರುವ ಸಂವಿಧಾನದ ಶ್ರೇಷ್ಠತೆ ಗೊತ್ತಾಗಬೇಕಾದರೆ ಸಂವಿಧಾನದಲ್ಲಿ ನಂಬಿಕೆ, ಬದ್ಧತೆ ಇರುವವರಿಗೆ ಮಾತ್ರ ಸಾಧ್ಯ ಎಂದೂ ಹೇಳಿದರು

ತುಳುವಿಗೆ ಅಧಿಕೃತ ಸ್ಥಾನಮಾನ :
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಿಸುವ ಬಗ್ಗೆ ಪ್ರಸ್ತಾಪಿಸಿದ ಸಿಎಂ, ತುಳು ಭಾಷೆಗೆ ಗೌರವ ನೀಡುವ ಕೆಲಸ ಮಾಡುತ್ತೇವೆ. ಆದರೆ ಕನ್ನಡಕ್ಕೆ ಎಂದೂ ಮೊದಲ ಆದ್ಯತೆ ಇರಬೇಕು ಎಂದರು.
ಜನರ ನಿರೀಕ್ಷೆ ಹುಸಿ ಮಾಡಬೇಡಿ :
ಪ್ರಜಾಸೌಧಕ್ಕೆ ಶಿಲಾನ್ಯಾಸ ಮಾಡಿದ್ದೂ ನಾನೇ, ಉದ್ಘಾಟನೆಗೂ ಬಂದಿರೋದು ನನ್ನ ಸೌಭಾಗ್ಯ. ಪ್ರಜಾಸೌಧ ಜನರಿಗಾಗಿ ಮಾಡಿರೋದು. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಅವರ ನಂಬಿಕೆಯನ್ನು ಯಾವ ಅಧಿಕಾರಿಯೂ ಹುಸಿಗೊಳಿಸುವ ಕೆಲಸ ಮಾಡಕೂಡದು ಎಂದು ತಾಕೀತು ಮಾಡಿದರು

