ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತ, ಈ ಯೋಜನೆಯಿಂದ ಯಾವುದೇ ಲಾಭವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳೇ ನಿಂತು ಹೋಗಿವೆ. ಚುನಾವಣೆಯಲ್ಲಿ ನಮ್ಮ ವಿರುದ್ಧ ಪ್ರಚಾರ ಮಾಡಿದವರಿಗೂ ಈ ಯೋಜನೆಯ ಲಾಭ ಹೋಗುತ್ತಿದೆ. ಬಸ್ ಉಚಿತ ಆದರೆ ಓಕೆ, ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಪುನರ್ ಪರಿಶೀಲಿಸಿ, ಅದಕ್ಕೊಂದು ಮಾನದಂಡ ರೂಪಿಸಿ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಸಿಎಂ ಹಾಗೂ ಡಿಸಿಎಂ ಅವರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಖಾಸಗಿ ಹೊಟೇಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಒತ್ತಾಯಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು, ನಮ್ಮ ವಿರುದ್ದ ಮೈಕ್ ಹಿಡಿದು ಭಾಷಣ ಮಾಡಿದವರಿಗೂ ಈ ಯೋಜನೆ ಲಾಭವಾಗುತ್ತಿದೆ. ದಯವಿಟ್ಟು ಅದನ್ನ ಪುನರ್ ಪರಿಶೀಲಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಈ ಐದು ಯೋಜನೆಗಳಿಗೇ ಹೆಚ್ಚಿನ ಹಣ ಬಳಕೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಯೋಜನೆಗಳಿಗೆ ಕಂಟಕ ಎದುರಾಗಿದೆ. ನಾವು ಕ್ಷೇತ್ರದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಏನೂ ಹೇಳದ ಸ್ಥಿತಿಯಲ್ಲಿದ್ದೇವೆ ಎಂದು ತಿಳೀಸಿದ್ದಾರೆ ಎನ್ನಲಾಗಿದೆ