ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬಸ್ಥರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಶಿಕ್ಷಣ ಟ್ರಸ್ಟ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ನಿವೇಶನ ಹಂಚಿಕೆಯಲ್ಲಿ ಅಧಿಕಾರದ ದುರುಪಯೋಗ ಪ್ರಕರಣ ಈ ರಾಜಭವನದ ಮೆಟ್ಟಿಲೇರಿದೆ. ಹೀಗಾಗಿ ಇದು ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ತರುವ ಸಾಧ್ಯತೆಗಳಿವೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ತನ್ನ ಅಧಿಕಾರ ದುರುಪಯೋಗದಿಂದ ಸಿದ್ದಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಐದು ಎಕರೆ ಜಾಗ ಪಡೆದುಕೊಂಡಿದ್ದು, ಅಧಿಕಾರ ದುರುಪಯೋಗ ಆರೋಪದಲ್ಲಿ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರಿಗೆ ದೂರು ಸಲ್ಲಿಸಿದ್ದಾರೆ.