ಬೆಂಗಳೂರು : ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಗಲ ಮೇಲೆ ಸಿಲಿಂಡರ್ ಹೊತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ಲೆಕಾರ್ಡ್ ಹಿಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಮೊಳಗಿದ ಘೋಷಣೆಗಳು.
ಇದು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನಾ ಸ್ಥಳದಲ್ಲಿ ಕಂಡು ಬಂದ ದೃಶ್ಯಗಳು.
ಕರ್ನಾಟಕದಲ್ಲೀಗ ಎಲ್ಲವೂ ದುಬಾರಿಯಾಗಿದೆ ಎಂದು ಪ್ರಧಾನಿ ಮೋದಿ ಸೇರಿ ಕೇಂದ್ರ ಸರ್ಕಾರದ ಹಲವು ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ತಿರುಗೇಟು ನೀಡುತ್ತಾ ಬಂದಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ಗುರುವಾರ ಬೃಹತ್ ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದರು.
‘ಸಬ್ ಕಾ ಸಾಥ್ – ಸಬ್ ಕಾ ವಿನಾಶ್’ ಇಂಧನ ಬೆಲೆ ಏರಿಕೆ-ಅಚ್ಛೇ ದಿನ್ ಮರೀಚಿಕೆ’, ಏರಿದಸಿಲಿಂಡರ್ ಬೆಲೆ-ವಾಪಸ್ ಬಂತು ಸೌದೆ ಒಲೆ’ ಬೆಲೆ ಏರಿಕೆ ಬಿಸಿ-ಕಮ್ಮಿ ಮಾಡಿವಸಿ’, ಪೆಟ್ರೋಲ್, ಡೀಸೆಲ್ ದುಬಾರಿ-ಸಾಮಾನ್ಯ ಜೇಬು ರಾಬರಿ’, ‘ಜಿಎಸ್‌ಟಿ ಹೊರೆ- ಜನರಿಗೆ ಬರೆ’ ಎಂಬ ಘೋಷಣೆಗಳನ್ನೊಳಗೊಂಡ ಪ್ಲೆಕಾರ್ಡ್‌ಗಳನ್ನು ಹಿಡಿದುಕೊಂಡಿದ್ದ ನಾಯಕರು ಪ್ರತಿಭಟನೆಯಲ್ಲಿ ಗಮನ ಸೆಳೆದರು. ಜತೆಗೆ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ಸಚಿವರು, ಶಾಸಕರು, ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು.

