ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧಾರಕ್ಕೆ ಶನಿವಾರ ನ್ಯಾಯಾಲಯದಲ್ಲಿ ಗಡುವು ನಿಗದಿಯಾಗಿದ್ದರೆ, ಇತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಕೋರಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಡಿ.ಕೆ. ಶಿವಕುಮಾರ್ ಅವರಿಗೆ ತಾತ್ಕಾಲಿಕ ನಿರಾಳತೆ ದೊರೆತಿದ್ದರೆ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರಿಗೆ ಆತಂಕ ಮುಂದುವರಿದಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಬಗ್ಗೆ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಆ.12ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿಗಳಾದ ಸೋಮಶೇಖರ್ ಹಾಗೂ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠವು ಆದೇಶವನ್ನು ಗುರುವಾರ ಸಂಜೆ ಪ್ರಕಟಿಸಿತು.