ಮಂಗಳೂರು : ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ತಯ್ಯಂ ಉತ್ಸವದಲ್ಲಿ ಪಟಾಕಿ ಸಿಡಿಸಿದ ವೇಳೆ ಉಂಟಾದ ಅವಘಡದಲ್ಲಿ ಒಟ್ಟು 154 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಸೇರಿದಂತೆ ಕಾಸರಗೋಡಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಒಟ್ಟು 154 ಮಂದಿಯಲ್ಲಿ 97 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಈ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಶೇ.80ಕ್ಕಿಂತ ಅಧಿಕ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 21, ಕಣ್ಣೂರು ಎಂಐಎಂ ಆಸ್ಪತ್ರೆಯಲ್ಲಿ 18. ವಿಶಾಲ್ ಆಸ್ಪತ್ರೆಯಲ್ಲಿ17, ಜಿಲ್ಲಾಸ್ಪತ್ರೆಯಲ್ಲಿ 16 ಹಾಗೂ ಸಂಜೀವಿನಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ
ಕೇರಳದ ಉತ್ತರ ಮಲಬಾರ್ ಭಾಗದಲ್ಲಿ ತೆಯ್ಯಂ ಉತ್ಸವ ವಿಶೇಷವಾಗಿದ್ದು, ಚಾಮುಂಡಿ ದೈವಕ್ಕೆ ನಡೆಯುವ ಉತ್ಸವ ಇದಾಗಿದೆ ನೀಲೇಶ್ವರದಲ್ಲಿ ಈ ವರ್ಷದ ಮೊದಲ ತೈಯ್ಯಂ ಉತ್ಸವವಾಗಿದ್ದು, ಸೋಮವಾರ ರಾತ್ರಿ ಆರಂಭಗೊಂಡಿತ್ತು. ಉತ್ಸವ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಲಾಗಿತ್ತು. ಬಳಿಕ ಪಟಾಕಿ ದಾಸ್ತಾನು ಇರಿಸಿದ ಕಟ್ಟಡ ಬಳಿಯೇ ಸುಡುಮದ್ದು ಸಿಡಿಸಿದ ಪರಿಣಾಮ ಅದರ ಕಿಡಿ ಪಟಾಕಿ ದಾಸ್ತಾನಿಗೆ ಬಿದ್ದಿತ್ತು. ಇದರಿಂದಾಗಿ ಅಲ್ಲಿದ್ದ ಪಟಾಕಿ ರಾಶಿಗೆ ಏಕಕಾಲಕ್ಕೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿತ್ತು.
ಘಟನೆ ವೇಳೆ ತೆಯ್ಯಂ ಉತ್ಸವ ನಡೆಯುತ್ತಿದ್ದು ಉತ್ಸವ ನೋಡಲು ಆಗಮಿಸಿದ ಸಾವಿರಾರು ಮಂದಿ ಗಾಬರಿಯಿಂದ ಚಲ್ಲಾಪಿಲ್ಲಿಯಾಗಿ ಓಟಕ್ಕಿತ್ತಿದ್ದಾರೆ. ಹಲವು ಮಂದಿ ಬೆಂಕಿಯ ಅವಘಡಕ್ಕೆ ಒಳಗಾದರೆ, ಇನ್ನೂ ಕೆಲವು ಮಂದಿ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ.