ಬೆಂಗಳೂರು : ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟ ಮುಂದುವರಿಸಲಾಗುವುದು, ತೆರಿಗೆ ಹಂಚಿಕೆ ಅನ್ಯಾಯವನ್ನು ಕಾನೂನಾತ್ಮಕವಾಗಿ ಎದುರಿಸುವ ಕುರಿತು ಮುಖ್ಯಮಂತ್ರಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಿತ ಕಾಪಾಡಲು ಈ ಹೋರಾಟ ಮಾಡಲೇಬೇಕಿದೆ. ಸಾಕಷ್ಟು ಬಿಜೆಪಿ ಸಂಸದರಿದ್ದರೂ ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಏತಕ್ಕಾಗಿ ಮೌನವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದರು. ನೀರಾವರಿ, ನಗರಾಭಿವೃದ್ಧಿ ಯೋಜನೆಗಳಿಗೆ ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ರಾಜ್ಯದ ಪಾಲಿನ ತೆರಿಗೆ ನೀಡದೇ ಮಾಡುತ್ತಿರುವ ಅನ್ಯಾಯವನ್ನು ಕಾನೂನಾತ್ಮಕ ವಾಗಿ ಯಾವ ರೀತಿಯಲ್ಲಿ ಎದುರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.