ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು 57ನೇ ಸಿಸಿತ್ ನ್ಯಾಯಾಲಯ ಮುಂದೂಡಿದೆ. ಶನಿವಾರ ನಡೆದ ವಿಚಾರಣೆ ವೇಳೆ ಆರೋಪಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ರೇಣುಕಾಸ್ವಾಮಿಯ ಮೃತದೇಹ ಜೂನ್ 9ರಂದು ಪತ್ತೆಯಾಗಿರುವುದಾಗಿ ಸೆಕ್ಯುರಿಟಿ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿದೆ. ಆದರೆ ಪೊಲೀಸರು ಜೂನ್ 11 ರಂದು ಮಧ್ಯಾಹ್ನ 2:45ರ ಸುಮಾರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲು ವಿಳಂಬ ಮಾಡಿರುವುದು ಏಕೆ ಎಂದು ಪ್ರಶ್ನಿಸಿದರು. ಅಲ್ಲದೆ ಜೂನ್ 18ರಂದು ದರ್ಶನ್ ಅವರ ಮನೆಯಲ್ಲಿ 37.5 ಲಕ್ಷ ರೂ. ಹಣವನ್ನ ಜಪ್ತಿ ಮಾಡಿರುವ ಪೊಲೀಸರು, ಪ್ರಕರಣದ ಇತರೆ ಆರೋಪಿಗಳಿಗೆ ನೀಡಲು ಹಣ ಸಂಗ್ರಹಿಸಿಟ್ಟಿರುವುದಾಗಿ ಹೇಳಿಕೆ ಪಡೆದಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮೋಹನ್ ರಾಜ್ ಎಂಬುವರು ತಮ್ಮ ಮಗಳ ಆಲ್ಬಂ ಸಾಂಗ್ ಮಾಡಿಸಲು ದರ್ಶನ್ ಅವರಿಂದ ಫೆಬ್ರವರಿಯಲ್ಲಿ ಹಣ ಪಡೆದಿದ್ದರು. ಆ ಸಾಲದ ಹಣವನ್ನ ಮೇ 2ರಂದೇ ವಾಪಸ್ ನೀಡಿದ್ದಾರೆ. ಅದೇ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ವಿವರಣೆ ನೀಡಿದರು. ಒಟ್ಟಿನಲ್ಲಿ ಪೊಲೀಸರು ಆರೋಪಪಟ್ಟಿಯಲ್ಲಿ ದಾಖಲಿಸಿದ ಅಂಶಗಳು ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಮಾದರಿಯ ಕಥೆಯಂತಿದೆ ಎಂದು ವ್ಯಂಗ್ಯವಾಡಿದರು.
ಇದೇ ಪ್ರಕರಣದ ಇತರ ಆರೋಪಿಗಳಾದ ಅನುಕುಮಾರ್, ರಾಘವೇಂದ್ರ ಹಾಗೂ ಪವನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಶನಿವಾರವೇ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿದೆ.