ಬೆಂಗಳೂರು : ರಾಜ್ಯದಲ್ಲಿ ಕೂಡಲೇ ಡೆಂಘೀ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಅವರು ಭಾನುವಾರ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಡೆಂಘೀ ರೋಗಿಗಳನ್ನು ಭೇಟಿ ಮಾಡಿ, ಅಲ್ಲಿರುವ ಸೌಲಭ್ಯ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡೆಂಘೀ ರೋಗ ಹೀಗೆ ಹರಡುವಾಗ ಸರ್ಕಾರ ಪ್ರತಿ ತಾಲೂಕಲ್ಲಿ ಟಾಸ್ಕ್‌ಫೋರ್ಸ್ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರ್ಕಾರ ಮಾಡಿಲ್ಲ, ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಡೆಂಘೀಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.