ಧರ್ಮಸ್ಥಳ : ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇಂದು ನ.26 ರಿಂದ 30ರವರೆಗೆ ನಡೆಯುಲಿದೆ
ಧರ್ಮಸ್ಥಳವು ಸರ್ವಧರ್ಮಗಳ ನೆಲೆವೀಡು. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪುಣ್ಯಭೂಮಿ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಇಲ್ಲಿ ನಿತ್ಯೋತ್ಸವ. ಇಲ್ಲಿನ ವಿಶಿಷ್ಟವಾದ ನ್ಯಾಯದಾನ, ಆಣೆಮಾತು ತೀರ್ಮಾನದಿಂದ ಅನೇಕ ಕುಟುಂಬಗಳ ಸಾಂಸಾರಿಕ, ವ್ಯವಹಾರ ಸಮಸ್ಯೆಗಳು ಸುಲಲಿತವಾಗಿ, ಸೌಹಾರ್ದಯುತವಾಗಿ ಪರಿಹಾರವಾಗಿ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸುಖ-ಶಾಂತಿಯ ಜೀವನ ನಡೆಸುತ್ತಿದ್ದಾರೆ.
ಇಂದು ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ. ಮಂಗಳವಾರ ಅಪರಾಹ್ನ ಮೂರು ಗಂಟೆಗೆ ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಉಜಿರೆಯಿಂದ ಹೊರಟು ಧರ್ಮಸ್ಥಳಕ್ಕೆ ಭಜನೆ, ದೇವರ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಬರುತ್ತಾರೆ ಶಾಸಕ ಹರೀಶ್ ಪೂಂಜ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಪಾದಯಾತ್ರೆಯಲ್ಲಿ ಭಾಗವಹಿಸುವರು. ಬಳಿಕ ಸಂಜೆ 7 ಗಂಟೆಗೆ ಹೆಗ್ಗಡೆಯವರು ಅಮೃತವರ್ಷಿಣಿ ಸಭಾಭವನದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ