ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ನಾಗೇಂದ್ರಗೆ ಮತ್ತೊಮ್ಮೆ ಜು.23ರವರೆಗೆ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲರು, ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ವರ್ಗಾವಣೆಯಾಗಿದ್ದಹಣ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ಈ ಬಗ್ಗೆ ಬಸನಗೌಡ ದದ್ದಲ್ ಮತ್ತು ನಾಗೇಂದ್ರ ನಿವಾಸದಲ್ಲಿ ಮಹತ್ವದ ದಾಖಲೆಗಳ ಪತ್ತೆಯಾಗಿವೆ. ಈ ಬಗ್ಗೆ ತನಿಖೆ ಮುಂದುವರೆಸಬೇಕು ಎಂದು ಮನವಿ ಮಾಡಿದೆ. ಇಡಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ನಾಗೇಂದ್ರಗೆ ಕಸ್ಟಡಿ ವಿಧಿಸಿದೆ.
ಬಸನಗೌಡ ದದ್ದಲ್ ವಿಚಾರಣೆ: ಈವರೆಗೆ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಹಗರಣದ ಮತ್ತೊಬ್ಬ ಆರೋಪಿ ಶಾಸಕ ಬಸನಗೌಡ ದದ್ದಲ್ ಗುರುವಾರ ಇಡಿ ವಿಚಾರಣೆಗೆ ಶಾಂತಿನಗರದಲ್ಲಿರುವ ಕಚೇರಿಗೆ ಹಾಜರಾಗಿದ್ದಾರೆ. ದದ್ದಲ್ರನ್ನು ವಿಚಾರಣೆಗೊಳಪಡಿಸಿದ ಇಡಿ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.