ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಬಂದೂಕು ಪರವಾನಗಿ ಅಮಾನತುಗೊಂಡ ಬೆನ್ನಲ್ಲೇ ನಟ ದರ್ಶನ್ ಅವರು ತಮ್ಮ ಬಳಿ ಇದ್ದ ಎರಡು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಮಂಗಳವಾರ ಒಪ್ಪಿಸಿದ್ದಾರೆ.
ಕೊಲೆ ಆರೋಪ ಹೊತ್ತಿರುವ ಕಾರಣಕ್ಕೆ ದರ್ಶನ್ ಅವರಿಗೆ ನೀಡಿದ್ದ ಬಂದೂಕು ಪರವಾನಗಿಯನ್ನು ನಗರದ ಡಿಸಿಪಿ (ಆಡಳಿತ) ಪದ್ಮನಿಸಾಹು ಅಮಾನತುಗೊಳಿಸಿ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ನಟನ ಮನೆಗೆ ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು ತಮ್ಮ ಸಹಾಯಕನ ಮೂಲಕ ಪೊಲೀಸರ ಸುಪರ್ದಿಗೆ ದರ್ಶನ್ ನೀಡಿದರು.
ಬಂದೂಕು ಪರವಾನಗಿ ರದ್ದುಪಡಿಸುವ ಸಂಬಂಧ ದರ್ಶನ್‌ಗೆ ಡಿಸಿಪಿ ನೋಟಿಸ್ ನೀಡಿದ್ದರು. ದರ್ಶನ್ ತಮ್ಮ ಬಂದೂಕು ರದ್ದುಪಡಿಸದಂತೆ ಕೋರಿದ್ದರು. ಸುರಕ್ಷತೆ ದೃಷ್ಟಿಯಿಂದ ಪಿಸ್ತೂಲ್ ಅಗತ್ಯವಿದೆ ಎಂದು ವಿನಂತಿಸಿದ್ದರು. ಆದರೆ ಕೊಲೆ ಪ್ರಕರಣದ ಆರೋಪಿಯಾಗಿರುವ ಕಾರಣ ನೀಡಿ ದರ್ಶನ್ ಅವರ ಬಂದೂಕು ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಡಿಸಿಪಿ ಪದ್ಮನಿ ಆದೇಶಿಸಿದ್ದರು.