ಬೆಂಗಳೂರು : ಬೆಳಗಾವಿ ಅಧಿವೇಶನದ ವೇಳೆ ಸಚಿವ ಲಕ್ಷ್ಮೀ ಹೆಬ್ಬಾಕ್ಟರ್ ಅವರನ್ನು ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದ ಮೇರೆಗೆ ಬಂಧಿತರಾಗಿದ್ದ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್, ಅವರನ್ನು ಇದ್ದ ಸ್ಥಳದಲ್ಲೇ ತಕ್ಷಣ ಬಿಡುಗಡೆ ಮಾಡುವಂತೆ ಪೊಲೀಸರಿಗೆ ತಾಕೀತು ಮಾಡಿದೆ. ಜೊತೆಗೆ ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಸಿ.ಟಿ.ರವಿ ಅವರು ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ರವಿ ಅವರು ವಿಧಾನ ಪರಿಷತ್ ಸದಸ್ಯ, ಅಂತಹವರು ತಲೆಮರೆಸಿಕೊಂಡು ತನಿಖೆಗೆ ಅಲಭ್ಯವಾ ಗುವಂಥ ಪರಿಸ್ಥಿತಿ ಇರಲಿಲ್ಲ. ಹೀಗಿದ್ದರೂ ತರಾತುರಿಯಲ್ಲಿ ಬಂಧಿಸಿರುವ ರೀತಿ ಸರಿಯಲ್ಲ ಎಂದು ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಚಾಟಿ ಬೀಸಿದೆ..
ಪ್ರಕರಣ ಸಂಬಂಧ ತಮ್ಮನ್ನು ಬಂಧನ ಮಾಡಿರುವ ಪೊಲೀಸರ ಕ್ರಮವನ್ನು ಅಕ್ರಮವೆಂದು ಘೋಷಿಸಬೇಕು ಹಾಗೂ ಕೂಡಲೇ ತಮ್ಮನ್ನು ಬಂಧಮುಕ್ತಗೊಳಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಿ.ಟಿ. ರವಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ ಈ ಆದೇಶ ಮಾಡಿದೆ.
ಆದೇಶದ ಬೆನ್ನಲ್ಲೇ ಬೆಳಗಾವಿಯಿಂದ ಬೆಂಗಳೂರಿನತ್ತ ಕರೆತರುವಾಗ ದಾವಣಗೆರೆಯಲ್ಲಿ ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಸಿ.ಟಿ.ರವಿ ಅವರಿಗೆ ಒಂದೇ ದಿನದಲ್ಲಿ ಬಿಡುಗಡೆ ಭಾಗ್ಯ ಸಿಕ್ಕಿದೆ.