ಬೆಂಗಳೂರು : ಭಯೋತ್ಪಾದಕರ ಬಾಂಬ್ ಸ್ಫೋಟದ ಸಂಚು ಬಯಲಾದ ಬೆನ್ನಲ್ಲೇ ಸುರಕ್ಷತೆ ದೃಷ್ಟಿಯಿಂದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಪ್ರವೇಶ ದ್ವಾರಕ್ಕೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.ಕಚೇರಿ ಪ್ರವೇಶಿಸುವವರು ಈ ಮೆಟಲ್ ಡಿಟೆಕ್ಟರ್ ಪ್ರವೇಶ ದ್ವಾರದ ಮೂಲಕವೇ ಕಚೇರಿ ಪ್ರವೇಶಿಸಬೇಕು.ಅಂತೆಯೆ ಪ್ರವೇಶ ದ್ವಾರದ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.ಜೊತೆಗೆ ನಿತ್ಯ ಮಲ್ಲೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಪಿಎಸ್‌ಐಗಳು ಬಿಜೆಪಿ,ಕಚೇರಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲು ಸೂಚಿಸಲಾಗಿದೆ.
ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ‘ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.ಬಂಧಿತ ಆರೋಪಿಗಳು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವೇ ರಾಜ್ಯ ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ವಿಚಾರ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಆರೋಪಿಗಳು ಬೆಂಗಳೂರಿನ ಕೆಫೆಯೊಂದರಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರವನ್ನು ಎನ್‌ಐಎ ಅಧಿಕಾರಿಗಳು,ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.ಈ ಹಿಂದೆ ಬಿಜೆಪಿ ರಾಜ್ಯ ಕಚೇರಿ ಹೊರ ಆವರಣದಲ್ಲಿ ಉಗ್ರರು ಬಾಂಬ್ ಸ್ಫೋಟಿ ಸಿದ್ದರು.ಇದೀಗ ಬಿಜೆಪಿ ಕಚೇರಿಯನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ವಿಚಾರ ಹೊರಬಿದ್ದ ಬೆನ್ನಲ್ಲೇ ಕಚೇರಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.