ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ವಾರದೊಳಗೆ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತು, ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ” ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಹೆಸರನ್ನು ಉಲ್ಲೇಖಿಸಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಸಿಎಂ ಆಗಿ ಒಂದು ವರ್ಷವೇ ಕಳೆಯಿತು, ಸಿಐಡಿ ಅವರ ಅಧೀನದಲ್ಲಿದೆ. ನಾನು ತಪ್ಪು ಮಾಡಿದ್ದರೆ ತನಿಖೆ ಮಾಡಿಸಿ, ಜೈಲಿಗೆ ಕಳುಹಿಸಬಹುದಿತ್ತು. ಅದನ್ನು ಮಾಡಿಲ್ಲ, ನಾನು ಮಂತ್ರಿಯಾಗಿದ್ದಾಗ ಅವರು ವಿಪಕ್ಷ ನಾಯಕರಾಗಿದ್ದರು. ಆಗಲೂ ಏನು ಸೊಲ್ಲೆತ್ತಲಿಲ್ಲ, ಈಗ ವಾಲ್ಮೀಕಿ ನಿಗಮದ ಹಗರಣದ ಆರೋಪ ಅವರ ಮೇಲೆ ಬಂದಾಗ, ಬೇರೆಯವರ ತಲೆಗೆ ಆರೋಪ ಹೊರಿಸುವುದು ಎಷ್ಟು ಸರಿ ? ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಆಕ್ರೋಶದಿಂದ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ನನ್ನ ಹೆಸರು * ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಬೇಕು, ಇಲ್ಲ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ, ತಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಕೋಟ ಸವಾಲು ಹಾಕಿದರು.
ಪ್ರಜಾಪ್ರಭುತ್ವದಲ್ಲಿ ಸತ್ಯಕ್ಕೆ ಅಪಚಾರವಾಗಬಾರದು, ಬಹುಶಃ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಅನುಮತಿ ಬೇಕಾಗುತ್ತದೆ, ಈ ಬಗ್ಗೆ ಕೂಡ ಯೋಚನೆ ಮಾಡುತ್ತೇನೆ ಎಂದರು.