Home » ಶಾಸಕರ ಅಮಾನತು ಆದೇಶ ಹಿಂಪೆಡೆದ ಸ್ಪೀಕರ್
 

ಶಾಸಕರ ಅಮಾನತು ಆದೇಶ ಹಿಂಪೆಡೆದ ಸ್ಪೀಕರ್

by Kundapur Xpress
Spread the love

ಬೆಂಗಳೂರು : ಕಳೆದ ಎರಡು ತಿಂಗಳಿಂದ ವಿಧಾನಸಭೆಯಿಂದ ಅಮಾನತುಗೊಂಡಿದ್ದ ಪ್ರತಿಪಕ್ಷ ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಭಾನುವಾರ ಹಿಂಪಡೆಯಲಾಗಿದೆ. ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಹನಿಟ್ಯಾಪ್ ಹಾಗೂ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕದ ವಿರುದ್ಧ ಬಜೆಟ್ ಅಧಿವೇಶನದ ಕೊನೆಯ ದಿನ (ಮಾ.21) ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸುವ ವೇಳೆ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಆರೋಪದಲ್ಲಿ 18 ಮಂದಿ ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಖಾದರ್ ಆದೇಶ ಹೊರಡಿಸಿದ್ದರು. ಇದೀಗ ವಿಧಾನಸಭೆಯ ಕಾರ್ಯದರ್ಶಿಯವರು ಅಮಾನತು ಆದೇಶವನ್ನು ಹಿಂಪಡೆದು ಆದೇಶಿಸಿದ್ದಾರೆ.

ಸಂಧಾನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಮಾ.21ರಂದು ಕಳೆದ ಅಧಿವೇಶನದ ಕೊನೆಯ ದಿನ ನಡೆದ ಘಟನೆಯ ಹಿನ್ನೆಲೆಯಲ್ಲಿ ಸಾಂವಿಧಾನಿಕ ಮಹತ್ವ ಹೊಂದಿರುವ ಸಭಾಧ್ಯಕ್ಷರ ಪೀಠದ ಗೌರವ ಉಳಿಸಲು ಶಾಸಕರನ್ನು ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗಿತ್ತು. ಈಗಾಗಲೇ ಎರಡು ತಿಂಗಳಾಗಿದೆ. ಉದ್ದೇಶಪೂರ್ವಕವಾಗಿ ಪೀಠಕ್ಕೆ ಆಗೌರವ ತೋರಿಲ್ಲವೆಂದು ಶಾಸಕರು ಹೇಳಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ ಕೂಡ ಈ ಬಗ್ಗೆ ನನ್ನನ್ನು ಹಲವು ಬಾರಿ ಸಂಪರ್ಕಿಸಿ, ಪತ್ರ ನೀಡಿ, ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು

 

Related Articles

error: Content is protected !!