ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ – ಲೋಕಾಯುಕ್ತ ಪೊಲೀಸರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಸದ್ದಿಲ್ಲದೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿಚಾರಣೆಯನ್ನು ಮುಗಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಗುರುವಾರ ಅವರಿಗೆ ನೋಟಿಸ್ ನೀಡಲಾಗಿತ್ತು. ಶುಕ್ರವಾರ ಅವರು ವಿಚಾರಣೆಗೆ ಹಾಜರಾಗಿದ್ದರು.
ಲೋಕಾಯುಕ್ತದ ಮೈಸೂರು ಎಸ್ಪಿ ಟಿ.ಜೆ. ಉದೇಶ ನೇತೃತ್ವದಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣದ 2ನೇ ಆರೋಪಿಯಾಗಿರುವ ಪಾರ್ವತಿ ಅವರನ್ನು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಪ್ರಕರಣದ 3ನೇ ಆರೋಪಿ ಮಲ್ಲಿಕಾರ್ಜುನಸ್ವಾಮಿ ಮತ್ತು 4ನೇ ಆರೋಪಿ ದೇವರಾಜು ಅವರುಗಳ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ.
ಪಾರ್ವತಿಯವರು ಮುಡಾ ಪ್ರಕರಣದಲ್ಲಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 14 ನಿವೇಶನಗಳನ್ನು ಮುಡಾಗೆ ವಾಪಸ್ ಮಾಡುವಾಗ ಖಾತೆ ರದ್ದು ಮಾಡುವ ವೇಳೆ ಕೂಡ ಕಾಣಿಸಿಕೊಂಡಿರಲಿಲ್ಲ ಎಲ್ಲಾ ವೇಳೆ ಗೌಪ್ಯತೆ ಕಾಪಾಡಲಾಗಿತ್ತು ಉಪ ನೋಂದಣಾಧಿಕಾರಿಯವರು ಪಾರ್ವತಿ ಅವರು ಇದ್ದಲ್ಲಿಯೇ ಹೋಗಿ ರದ್ದತಿ ಪ್ರಕ್ರಿಯೆ ಮುಗಿಸಿದ್ದರು.