ಬೆಂಗಳೂರು : ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮತ್ತು ಶಿಶುವಿನ ಮರಣ ಸಂಬಂಧಿಸಿ ಕಾಂಗ್ರೆಸ್ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದ್ದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಳ್ಳಾರಿ ಸಹಿತ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮತ್ತು ಶಿಶು ಮರಣ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ರಾಜ್ಯ ಬಿಜೆಪಿ ನಿಯೋಗವು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದೆ.
ಬಾಣಂತಿಯರು ಮತ್ತು ಶಿಶು ಮೃತಪಟ್ಟ ಪ್ರಕರಣಗಳಲ್ಲಿ ಸರ್ಕಾರದ ಅಮಾನವೀಯ ನಡೆಯನ್ನು ಜನರು ಪ್ರಶ್ನಿಸುವಂತಾಗಿದೆ. ಬಳ್ಳಾರಿ ದುರ್ಘಟನೆಯ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ಮಾಡಿಸಬೇಕು ಹಾಗೂ ಮೃತ ಗರ್ಭಿಣಿಯರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿದ್ದಾರೆ. ಬಳ್ಳಾರಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ದುರ್ಘಟನೆಯಲ್ಲಿ 7 ಜನ ಬಾಣಂತಿಯರು ಮತ್ತು ಮಗು ಮೃತಪಟ್ಟಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಇಲ್ಲಿಗೆ ಇನ್ನೂ ಭೇಟಿ ಕೊಟ್ಟಿಲ್ಲ ಎಂದು ಟೀಕಿಸಿದರು. ಜಮೀರ್ ಅಹ್ಮದ್ ಬಿಡಿ ಉಸ್ತುವಾರಿ ಸಚಿವರು, ಅವರಿಗೂ ಇದಕ್ಕೂ ಸಂಬಂಧವೇ ಇಲ್ಲ. ಅವರು ವಕ್ಸ್ ವಿಚಾರದಲ್ಲಿ ಬ್ಯುಸಿ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಪ್ಪು ಪಟ್ಟಿಗೆ ಸೇರಿಸಿದ ಕಂಪನಿಯಿಂದ ಐವಿ ಗ್ಲುಕೋಸ್ ಖರೀದಿಸಿದ್ದರಿಂದ ರಾಜ್ಯ ಸರ್ಕಾರವೇ ಈ ದುರ್ಘಟನೆಗೆ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.